ಭಾರತಕ್ಕೆ ‘ಸೀ ಗಾರ್ಡಿಯನ್’ ಡ್ರೋನ್‌ಗಳ ಶೀಘ್ರ ಹಸ್ತಾಂತರ: ಅಮೆರಿಕ
ವಾಶಿಂಗ್ಟನ್, ಅ. 24: ‘ಸೀ ಗಾರ್ಡಿಯನ್’ ಡ್ರೋನ್‌ಗಳನ್ನು ಭಾರತಕ್ಕೆ ಹಸ್ತಾಂತರಿಸುವ ಒಪ್ಪಂದವನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ಕೆಲಸ ಮಾಡುತ್ತಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಜೂನ್ 26ರಂದು ನಡೆದ ಶೃಂಗ ಸಭೆಯಲ್ಲಿ ಶಸ್ತ್ರರಹಿತ ಸೀ ಗಾರ್ಡಿಯನ್ ಡ್ರೋನ್‌ಗಳನ್ನು ಭಾರತಕ್ಕೆ ಮಾರಾಟ ಮಾಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.
ಒಪ್ಪಂದದ ಪ್ರಕಾರ, 22 ಅತ್ಯಾಧುನಿಕ ಡ್ರೋನ್‌ಗಳನ್ನು ಅಮೆರಿಕ ಭಾರತಕ್ಕೆ ಹಸ್ತಾಂತರಿಸಬೇಕಾಗಿದೆ.
ಈ ಡ್ರೋನ್‌ಗಳು ಆಯಕಟ್ಟಿನ ಹಿಂದೂ ಮಹಾಸಾಗರದಲ್ಲಿ ಭಾರತೀಯ ನೌಕಾಪಡೆಯ ಕಣ್ಗಾವಲು ಸಾಮರ್ಥ್ಯವನ್ನು ಹೆಚ್ಚಿಸಲಿದೆ.
ಟ್ರಂಪ್ ಆಡಳಿತವು ಭಾರತವನ್ನು ಮಹತ್ವದ ರಕ್ಷಣಾ ಭಾಗೀದಾರ ಎಂಬುದಾಗಿ ಪರಿಗಣಿಸಿರುವ ಹಿನ್ನೆಲೆಯಲ್ಲಿ, ಅಧಿಕಾರಶಾಹಿಯ ಕಿರಿಕಿರಿಯನ್ನು ತಪ್ಪಿಸಿ ಡ್ರೋನ್‌ಗಳ ಮಾರಾಟ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಆಡಳಿತವು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಜನರಲ್ ಆಟೋಮಿಕ್ಸ್‌ನ ಯುಎಸ್ ಆ್ಯಂಡ್ ಇಂಟರ್‌ನ್ಯಾಶನಲ್ ಸ್ಟ್ರಾಟಜಿಕ್ ಡೆವಲಪ್‌ಮೆಂಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿವೇಕ್ ಲಾಲ್ ತಿಳಿಸಿದರು.
ಈ 22 ಡ್ರೋನ್‌ಗಳ ವೆಚ್ಚ 2 ಬಿಲಿಯ ಡಾಲರ್ (ಸುಮಾರು 13,000 ಕೋಟಿ ರೂಪಾಯಿ) ಆಗಿರುತ್ತದೆ.