ಡೊನಾಲ್ಡ್ ಟ್ರಂಪ್ ರ ‘ನಿರಾಶ್ರಿತರಿಗೆ ನಿಷೇಧ’ ಅವಧಿ ಅಂತ್ಯ
Update: 2017-10-24 21:41 IST
ವಾಷಿಂಗ್ಟನ್, ಅ.24: ಅಮೆರಿಕ ಪ್ರವೇಶಿಸದಂತೆ ನಿರಾಶ್ರಿತರ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ್ದ ನಾಲ್ಕು ತಿಂಗಳ ನಿಷೇಧ ಮಂಗಳವಾರ ಕೊನೆಗೊಂಡಿದ್ದು, ಹೊಸ ಕಾರ್ಯವಿಧಾನಗಳನ್ನು ಅನಾವರಣ ಮಾಡಲು ತಯಾರಿ ನಡೆಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲಾ ದೇಶಗಳ ನಿರಾಶ್ರತರಿಗೆ ಅಮೆರಿಕ ಪ್ರವೇಶ ನಿರ್ಬಂಧಿಸಿದ್ದ ಆದೇಶವೊಂದಕ್ಕೆ ಟ್ರಂಪ್ ಸಹಿಹಾಕಿದ್ದರು. ಈ ಆದೇಶದಲ್ಲಿ ನಿರ್ಬಂಧದ ಕೊನೆಯ ದಿನಾಂಕವನ್ನೂ ಬರೆಯಲಾಗಿತ್ತು ಹಾಗು ಮಂಗಳವಾರ ಈ ನಿರ್ಬಂಧ ಕೊನೆಗೊಂಡಿದೆ. ಹೊಸ ಕಾರ್ಯ ವಿಧಾನಗಳನ್ನು ಶೀಘ್ರ ಅನಾವರಣ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಷೇಧದ ಅವಧಿ ಮುಗಿದಿದ್ದರೂ ಈ ಮೊದಲಿಗೆ ಹೋಲಿಸಿದರೆ ಈ ಬಾರಿ ಅಮೆರಿಕ ಪ್ರವೇಶಿಸುವ ನಿರಾಶ್ರಿತರ ಸಂಖ್ಯೆ ಗಣನೀಯವಾಗಿ ಕುಸಿತವಾಗಲಿದೆ ಎನ್ನಲಾಗಿದೆ.