ನಾಳೆ ಪ್ರೊ ಕಬಡ್ಡಿ ಫೈನಲ್: ಪ್ರಶಸ್ತಿಗಾಗಿ ಗುಜರಾತ್-ಪಾಟ್ನಾ ಹೋರಾಟ

Update: 2017-10-27 18:24 GMT

ಚೆನ್ನೈ, ಅ.27: ಐದನೆ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಫೈನಲ್ ಪಂದ್ಯ ಚೆನ್ನೈನ ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿದ್ದು, ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ಮತ್ತು ಗುಜರಾತ್ ಸೂಪರ್‌ಜೈಂಟ್ಸ್ ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿವೆ.

ಸತತ ಎರಡು ಆವೃತ್ತಿಗಳಲ್ಲಿ ಪ್ರಶಸ್ತಿ ಎತ್ತಿರುವ ಪಾಟ್ನಾ ಪೈರೇಟ್ಸ್ ತಂಡ ಹ್ಯಾಟ್ರಿಕ್ ಪ್ರಶಸ್ತಿ ಎತ್ತುವ ತಯಾರಿಯಲ್ಲಿದೆ. ಮೊದಲ ಬಾರಿ ಫೈನಲ್ ತಲುಪಿರುವ ಗುಜರಾತ್ ತಂಡ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದೆ.

ಮೂರು ತಿಂಗಳುಗಳ ಕಾಲ ನಡೆದ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಉಭಯ ತಂಡಗಳು ಬೆಂಗಾಲ್ ವಾರಿಯರ್ಸ್ ತಂಡವನ್ನು ಅಂತಿಮ ಪಂದ್ಯದಲ್ಲಿ ಮಣಿಸಿ ಫೈನಲ್ ತಲುಪಿವೆ.

ಪಾಟ್ನಾ ಪೈರೇಟ್ಸ್ ತಂಡ 2ನೆ ಕ್ವಾಲಿಫೆಯರ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡವನ್ನು 47-44 ಅಂತರದಿಂದ ಮಣಿಸಿ ಫೈನಲ್ ತಲುಪಿತ್ತು. ಪಾಟ್ನಾ ತಂಡದ ಪರ ಪ್ರದೀಪ್ ನರ್ವಾಲ್ 24 ರೈಡ್ ಪಾಯಿಂಟ್ಸ್‌ಗಳನ್ನು ಕಲೆ ಹಾಕಿದ್ದರು.10 ಟ್ಯಾಕಲ್ ಪಾಯಿಂಟ್ಸ್‌ನ್ನು ಪಾಟ್ನಾ ಸಂಪಾದಿಸಿತ್ತು.

ಗುಜರಾತ್ ಫಾರ್ಚೂನ್‌ಜೈಂಟ್ಸ್ ಮುಂಬೈನ ಎನ್‌ಎಸ್‌ಸಿಐ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ 42-17 ಅಂತರದಲ್ಲಿ ಜಯ ಸಾಧಿಸಿ ಮೊದಲ ಬಾರಿ ಫೈನಲ್ ತಲುಪಿದೆ. ಪಾಟ್ನಾದ ಪ್ರದೀಪ್ ನರ್ವಾಲ್ 350 ಪಾಯಿಂಟ್ಸ್ ಕಲೆ ಹಾಕಿ ತಂಡದ ಯಶಸ್ಸಿನಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ.

►ಪಂದ್ಯದ ಸಮಯ: ರಾತ್ರಿ 8:00 ಗಂಟೆಗೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News