×
Ad

ಕ್ಯಾಟಲೋನಿಯ ಆಡಳಿತವನ್ನು ತನ್ನ ವಶಕ್ಕೆ ಪಡೆದ ಮ್ಯಾಡ್ರಿಡ್

Update: 2017-10-28 22:03 IST

ಬಾರ್ಸಿಲೋನ (ಸ್ಪೇನ್), ಅ. 28: ಸ್ಪೇನ್ ಶನಿವಾರ ಕ್ಯಾಟಲೋನಿಯದ ಆಡಳಿತವನ್ನು ತನ್ನ ನೇರ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಹಾಗೂ ವಲಯದ ಪ್ರತ್ಯೇಕತಾವಾದಿ ಸರಕಾರವನ್ನು ಉಚ್ಚಾಟಿಸಿದೆ.

ಸಂಪದ್ಭರಿತ ಈಶಾನ್ಯ ವಲಯದ ಸ್ವಾತಂತ್ರ್ಯ ಘೋಷಣೆಯನ್ನು ಕ್ಯಾಟಲೋನಿಯ ಸಂಸತ್ತು ಅಂಗೀಕರಿಸಿದ ಒಂದು ದಿನದ ಬಳಿಕ ಸ್ಪೇನ್ ಸರಕಾರ ಈ ಸಂಬಂಧ ಆದೇಶವೊಂದನ್ನು ಹೊರಡಿಸಿದೆ.

ಆದರೆ, ಈ ಆದೇಶವನ್ನು ಪಾಲಿಸಲು ಕ್ಯಾಟಲೋನಿಯದ ಹಿರಿಯ ಅಧಿಕಾರಿಗಳು ಒಪ್ಪಿದ್ದಾರೆಯೇ ಅಥವಾ ವಲಯದ ಹಾಲಿ ಸರಕಾರವನ್ನು ವಜಾಗೊಳಿಸಲು ನಿರಾಕರಿಸಿದ್ದಾರೆಯೇ ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ.

ಬಾರ್ಸಿಲೋನದಲ್ಲಿರುವ ಪ್ರಾದೇಶಿಕ ಸಂಸತ್ತಿನ ಪ್ರತ್ಯೇಕತಾವಾದಿ ನಡೆಯನ್ನು ತಡೆಯಲು ಸ್ಪೇನ್‌ನ ರಾಷ್ಟ್ರೀಯ ಸಂಸತ್ತು ತೆಗೆದುಕೊಂಡ ಅಭೂತಪೂರ್ವ ಕ್ರಮ ಇದಾಗಿದೆ.

ದೇಶದ ಗಝೆಟ್‌ನಲ್ಲಿರುವ ಈ ವಿಶೇಷ ಕ್ರಮಗಳನ್ನು ಇಂಟರ್‌ನೆಟ್ ಮೂಲಕ ಪ್ರಸಾರ ಮಾಡುವ ಮೂಲಕ, ಕ್ಯಾಟಲೋನಿಯದ ಮೇಲಿನ ತನ್ನ ನಿಯಂತ್ರಣವನ್ನು ಸ್ಪೇನ್ ಶನಿವಾರ ಅಧಿಕೃತಗೊಳಿಸಿದೆ.

ಅದೇ ವೇಳೆ, ಸ್ಪೇನ್ ಪ್ರಧಾನಿ ಮರಿಯಾನೊ ರಜೊಯ್ ಕ್ಯಾಟಲೋನಿಯ ಸಂಸತ್ತನ್ನು ವಿಸರ್ಜಿಸಿದ್ದಾರೆ ಹಾಗೂ ಡಿಸೆಂಬರ್ 21ರಂದು ಹೊಸದಾಗಿ ಪ್ರಾದೇಶಿಕ ಚುನಾವಣೆ ನಡೆಸಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News