×
Ad

ಕಸಾಯಿಖಾನೆಗಿಂತಲೂ ಭೀಕರವಾಗಿರುವ ಡೇರಿಗಳು!

Update: 2017-10-28 23:07 IST

► ಹೆಚ್ಚು ಹಾಲು ನೀಡಲು ಹಸುಗಳಿಗೆ ಆ್ಯಂಟಿಬಯಾಟಿಕ್ ಇಂಜೆಕ್ಷನ್ !

► ಗಂಡು ಕರು ಕಸಾಯಿಖಾನೆಗೆ ಅಥವಾ ಬೀದಿಗೆ !

 ಜೈಪುರ, ಅ.28: ಸಾಕಷ್ಟು ಗಾಳಿ ಬೆಳಕು ಇಲ್ಲದ ಇಕ್ಕಟ್ಟಾದ ಕೊಠಡಿಯಲ್ಲಿ ಹಸುಗಳನ್ನು ಸಾಕುತ್ತಿರುವುದು ಹಾಗೂ ಹೆಚ್ಚು ಹಾಲು ನೀಡಬೇಕೆಂಬ ಉದ್ದೇಶದಿಂದ ಹಸುಗಳಿಗೆ ಆ್ಯಂಟಿಬಯಾಟಿಕ್ ಹಾರ್ಮೋನ್ ಒಳಗೊಂಡ ಇಂಜೆಕ್ಷನ್ ಚುಚ್ಚುವುದು.. ಇಂತಹ ಪ್ರಕಣಗಳು ದೇಶದ ಹೆಚ್ಚಿನ ಹಾಲು ಉತ್ಪಾದನಾ ಕೇಂದ್ರದಲ್ಲಿ ನಡೆಸಲಾದ ಸಮೀಕ್ಷೆಯ ವೇಳೆ ಬೆಳಕಿಗೆ ಬಂದಿವೆ.

 10 ರಾಜ್ಯಗಳಲ್ಲಿರುವ 451 ಹಾಲು ಉತ್ಪಾದನಾ ಕೇಂದ್ರ (ಡೇರಿ)ಗಳಲ್ಲಿ ಫೆಡರೇಶನ್ ಆಫ್ ಇಂಡಿಯನ್ ಅನಿಮಲ್ ಪ್ರೊಟೆಕ್ಷನ್ ಆರ್ಗನೈಝೇಷನ್(ಎಫ್‌ಐಎಪಿಒ) ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಹಸುಗಳನ್ನು ಹಾಲು ಉತ್ಪಾದಿಸುವ ಯಂತ್ರಗಳಂತೆ ಪರಿಗಣಿಸಲಾಗುತ್ತಿದೆಯೇ ಎಂಬುದನ್ನು ದೃಢಪಡಿಸಲು ವಾಸ್ತವಾಂಶ ಪರೀಕ್ಷೆ ಹಾಗೂ ಸಮೀಕ್ಷೆಯನ್ನು ನಡೆಸಲಾಗಿದೆ. ಹಸುಗಳಿಗೆ ಹಾಲು ಹೆಚ್ಚಾಗಲು ನೀಡಲಾಗುವ ಆ್ಯಂಟಿಬಯಾಟಿಕ್ ಇಂಜೆಕ್ಷನ್ ಮನುಷ್ಯನ ಆರೋಗ್ಯಕ್ಕೆ ಹಾನಿಕರ ಅಂಶವನ್ನು ಒಳಗೊಂಡಿರುತ್ತದೆ.

  ರಾಜಸ್ತಾನದ ಆಲ್ವಾರ್, ಜೈಪುರ, ಜೋಧ್‌ಪುರ ಮತ್ತು ಬಿಕಾನೆರ್ ಜಿಲ್ಲೆಯ 49 ಡೇರಿಗಳಲ್ಲಿರುವ 1232 ಹಸುಗಳನ್ನೂ ಸಮೀಕ್ಷೆಯಲ್ಲಿ ಸೇರಿಸಲಾಗಿತ್ತು. ಭಾರತ ಸಾಧಿಸಿರುವ ‘ಶ್ವೇತಕ್ರಾಂತಿ’ಯ ಹಿನ್ನೆಲೆಯನ್ನು ಬಿಚ್ಚಿಟ್ಟಿರುವ ಸಮೀಕ್ಷೆಯ ವರದಿಯಲ್ಲಿ, ಹಾಲು ಉತ್ಪಾದಿಸುವ ಡೈರಿಗಳನ್ನು ನಿಯಂತ್ರಿಸುವ ಕಾಯ್ದೆಯ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಗಮನಹರಿಸುವ ಅಗತ್ಯವಿದೆ ಎಂದು ಹೇಳಲಾಗಿದೆ. 2016ರ ಜೂನ್‌ನಿಂದ 2017ರ ಮಾರ್ಚ್‌ವರೆಗಿನ ಅವಧಿಯಲ್ಲಿ ನಡೆಸಲಾಗಿರುವ ಸಮೀಕ್ಷೆಯ ವರದಿಯನ್ನು ಅಕ್ಟೋಬರ್ 26ರಂದು ಬಿಡುಗಡೆಗೊಳಿಸಲಾಗಿದೆ.

   ಆ್ಯಂಟಿಬಯಾಟಿಕ್ ಇಂಜೆಕ್ಷನ್‌ನಿಂದ ಹಸುಗಳಿಗೆ ಮಾತ್ರವಲ್ಲ, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸುವವರೂ ಸಮಸ್ಯೆಗೆ ಸಿಲುಕುತ್ತಾರೆ. ಹಸುಗಳನ್ನು ಯಾವ ರೀತಿ ಕಳಪೆದರ್ಜೆಯ ಕೊಠಡಿಯಲ್ಲಿ ಸಾಕಲಾಗುತ್ತಿದೆ ಎಂಬುದು ಸಮೀಕ್ಷೆಯ ಸಂದರ್ಭ ಬೆಳಕಿಗೆ ಬಂದಿದ್ದು ಇದು ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಹಾಲಿನ ಗುಣಮಟ್ಟ ಹಾಗೂ ಸುರಕ್ಷತೆಯ ಬಗ್ಗೆ ಪ್ರಶ್ನೆಯನ್ನು ಮೂಡಿಸಿದೆ. ಇಕ್ಕಟ್ಟಾದ ಕೊಠಡಿಯಲ್ಲಿ ಹಸುಗಳು ಜಾರಿಬಿದ್ದು ಗಾಯಗೊಳ್ಳುವ ಸಂಭವವೂ ಹೆಚ್ಚಾಗಿದೆ. ಸಮೀಕ್ಷೆ ನಡೆಸಲಾದ ಡೇರಿಗಳಲ್ಲಿ ಶೇ.64.1ರಷ್ಟು ಹಸುಗಳು ಗಾಯಗೊಂಡ, ಅಸ್ವಸ್ಥ , ಯಾತನಾಮಯ ಸ್ಥಿತಿಯಲ್ಲಿರುವ ದನಗಳಾಗಿವೆ ಎಂದು ಎಫ್‌ಐಎಪಿಒ ನಿರ್ದೇಶಕ ಅರ್ಪಣ್ ಶರ್ಮ ಹೇಳಿದ್ದಾರೆ.

ಹಸುಗಳಿಂದ ಕರುಗಳನ್ನು ಪ್ರತ್ಯೇಕಿಸಲಾಗುತ್ತದೆ.(ಶೇ.25ರಷ್ಟು ಡೇರಿಗಳಲ್ಲಿ ಹುಟ್ಟಿದ ಪ್ರಥಮ ವಾರದಲ್ಲೇ ಗಂಡು ಕರು ಸಾಯುತ್ತದೆ).ಶೇ.50ರಷ್ಟು ಡೇರಿಗಳಲ್ಲಿ ಹೆಚ್ಚು ಹಾಲು ನೀಡಬೇಕೆಂಬ ಉದ್ದೇಶದಿಂದ ಹಸುಗಳಿಗೆ ಹಾರ್ಮೋನ್ ಒಳಗೊಂಡ ಇಂಜೆಕ್ಷನ್ ನೀಡಲಾಗುತ್ತದೆ. ಶೇ.62.9ರಷ್ಟು ಡೇರಿಗಳಲ್ಲಿ ನಿರುಪಯುಕ್ತ (ಹಾಲು ಕರೆಯದ) ಹಸುಗಳನ್ನು ರೈತರಿಗೆ ಅಥವಾ ಕಸಾಯಿಖಾನೆಗೆ ಮಾರಾಟ ಮಾಡಲಾಗುತ್ತದೆ.

 ನಗರ ಪ್ರದೇಶದಲ್ಲಿರುವ ಶೇ.78ರಷ್ಟು ಡೇರಿಗಳಲ್ಲಿ ಹಸುಗಳನ್ನು ಒರಟು ನೆಲದಲ್ಲಿ ಕಟ್ಟಲಾಗುತ್ತಿದೆ. ಅಲ್ಲದೆ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಹಾಲು ಉತ್ಪಾದನೆಯಾಗುವ ಪ್ರದೇಶದಲ್ಲಿ ಇರಬೇಕಾದ ಸ್ಥಿತಿಗತಿಯ ಬಗ್ಗೆ ಮೌನವಾಗಿದೆ. ಹಾಲು ಸಂಸ್ಕರಿಸುವ ಪ್ರಕ್ರಿಯೆಯ ಬಗ್ಗೆ ಮಾತ್ರ ಎಫ್‌ಎಸ್‌ಎಸ್‌ಐ ಗಮನ ಹರಿಸಿದೆ. ಆದ್ದರಿಂದ ಈ ಬಗ್ಗೆ ಕೇಂದ್ರ ಸರಕಾರ ಗಮನ ಹರಿಸಿ, 1978ರ ಜಾನುವಾರು ವಾಸಸ್ಥಾನ ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದು, ಜಾನುವಾರು ವಾಸಸ್ಥಾನದ ಸ್ಥಿತಿಗತಿಯ ಬಗ್ಗೆ ಮಾನದಂಡ ಜಾರಿಗೊಳಿಸಬೇಕು ಎಂದು ಅರ್ಪಣ್ ಶರ್ಮ ಆಗ್ರಹಿಸಿದ್ದಾರೆ.

 1970ರಲ್ಲಿ ಅನುಷ್ಠಾನಗೊಂಡ ‘ಆಪರೇಷನ್ ಫ್ಲಡ್’(ಶ್ವೇತ ಕ್ರಾಂತಿ) ಯೋಜನೆಯ ಬಳಿಕ ದೇಶದಲ್ಲಿ ಉತ್ಪಾದನೆಯಾಗುವ ಹಾಲಿನ ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದ್ದು 2008ರ ವೇಳೆಗೆ 104 ಮಿಲಿಯನ್ ಟನ್‌ಗೆ ತಲುಪಿದೆ. (1970ರಲ್ಲಿ 22 ಮಿಲಿಯನ್ ಟನ್‌ಗಳಷ್ಟಿತ್ತು).

ಖಾಲ್‌ಬಚ್ಚ ಎಂಬ ಅಮಾನವೀಯ ಕ್ರಮ

ಇನ್ನೊಂದು ಆಘಾತಕರ ವಿಷಯವೆಂದರೆ , ಕರು ಸತ್ತ ದನಗಳ ಹಾಲು ಕರೆಯಲು ಬಳಸಲಾಗುತ್ತಿರುವ ‘ಖಾಲ್‌ಬಚ್ಚ’ ಎಂಬ ವಿಧಾನ. ಕರು ಸತ್ತರೆ ಮಾತೃಸಹಜವಾದ ಭಾವನೆಯಿಂದ ಆ ಹಸು ಹಾಲು ನೀಡುವುದನ್ನು ನಿಲ್ಲಿಸಿಬಿಡಬಹುದು. ಆದ್ದರಿಂದ ಸತ್ತ ಕರುವಿನ ದೇಹದಲ್ಲಿ ಹುಲ್ಲು ತುಂಬಿ, ಹಾಲು ಕರೆಯುವ ಸಂದರ್ಭ ಅದನ್ನು ತಾಯಿ ಹಸುವಿನ ಬಳಿ ನಿಲ್ಲಿಸಲಾಗುತ್ತದೆ. ಕರು ಇನ್ನೂ ಬದುಕಿದೆ, ತನ್ನ ಬಳಿಯೇ ನಿಂತಿದೆ ಎಂದು ಭಾವಿಸುವ ಹಸು ಹಾಲು ನೀಡುತ್ತದೆ.

ರಾಜಸ್ತಾನದ ಡೇರಿಗಳಲ್ಲಿರುವ ಪರಿಸ್ಥಿತಿ

►ಗಂಡು ಕರುವನ್ನು ಕಸಾಯಿಖಾನೆಗೆ ಮಾರಲಾಗುತ್ತದೆ ಅಥವಾ ಬೀದಿಯಲ್ಲಿ ಬಿಡಲಾಗುತ್ತದೆ. ರಾಜಸ್ತಾನದ ಸುಮಾರು ಶೇ.43ರಷ್ಟು ಡೇರಿಗಳಲ್ಲಿ ಒಂದೇ ಒಂದು ಗಂಡು ಕರುವಿಲ್ಲ.

►ಹಸು ಕರುವಿಗೆ ಜನ್ಮ ನೀಡಿದ ತಕ್ಷಣ ಕರುವನ್ನು ತಾಯಿಯಿಂದ ಬೇರ್ಪಡಿಸಲಾಗುತ್ತದೆ. ಕರು ಹೆಚ್ಚು ಹಾಲು ಕುಡಿದರೆ ಹಾಲು ನಷ್ಟವಾಗುತ್ತದೆ ಎಂಬುದು ಇದಕ್ಕೆ ಕಾರಣ.

►‘ಆಕ್ಸಿಟೊಸಿನ್’ ಎಂದು ಕರೆಯಲಾಗುವ ಹಾರ್ಮೋನ್‌ಯುಕ್ತ ಇಂಜೆಕ್ಷನ್ ನೀಡುವ ಮೂಲಕ ಹಸು ನಿರಂತರ ಹಾಲು ನೀಡುವಂತೆ ಮಾಡಲಾಗುತ್ತದೆ. ಇದು ಹಸುಗಳಿಗೆ ಅತ್ಯಂತ ನೋವು ನೀಡುವ ಇಂಜೆಕ್ಷನ್.

►ರಾಜಸ್ತಾನದ ಶೇ.87ರಷ್ಟು ಡೇರಿಗಳಲ್ಲಿ ಹಸುಗಳನ್ನು ದಿನವಿಡೀ ಅತ್ಯಂತ ಕಿರಿದಾದ ಹಗ್ಗದಲ್ಲಿ ಕಟ್ಟಿ ಹಾಕಲಾಗುತ್ತದೆ.

► ರಾಜ್ಯದ ಸುಮಾರು ಶೇ.52ರಷ್ಟು ಡೇರಿಗಳ ನೆಲಹಾಸು ಒರಟಾಗಿರುವ ಕಾರಣ ಹಸುಗಳಿಗೆ ಕಾಲಿನ ಗಂಟು ನೋವು, ಕಾಲು ಊನವಾಗುವುದು ಮುಂತಾದ ಸಮಸ್ಯೆ ಕಾಡುತ್ತದೆ.

► ಹಸುಗಳನ್ನು ಅತ್ಯಧಿಕ ಹಾಲು ನೀಡುವಂತೆ ‘ಶೋಷಿಸುವ’ ಪ್ರಕ್ರಿಯೆಯ ಕಾರಣ ಹಸುಗಳು ಒಣಗಿ (ಬತ್ತಿ)ಹೋಗುತ್ತವೆ. ಭಾರತದಲ್ಲಿ ಮಾಂಸಕ್ಕಾಗಿಯೇ ಹಸುಗಳನ್ನು ಸಾಕುವ ಕ್ರಮ ಇಲ್ಲದಿದ್ದರೂ ದೇಶವು ವಿಶ್ವದಲ್ಲಿ ದನದ ಮಾಂಸ ರಫ್ತು ಮಾಡುವ ರಾಷ್ಟ್ರಗಳಲ್ಲಿ ದ್ವಿತೀಯ ಸ್ಥಾನ ಪಡೆಯಲು ಈ ಅಂಶ ಪ್ರಧಾನ ಕಾರಣವಾಗಿದೆ ಎಂಬುದು ಗಮನಾರ್ಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News