ವಿರಾಟ್ ಕೊಹ್ಲಿಯಿಂದ ಇನ್ನೊಂದು ವಿಶ್ವ ದಾಖಲೆ
ಕಾನ್ಪುರ, ಅ.29: ಇಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ ಮೂರನೆ ಹಾಗೂ ಅಂತಿಮ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 9,000 ರನ್ ಗಳಿಸಿದ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಈ ಮೊದಲು ದಕ್ಷಿಣ ಆಫ್ರಿಕದ ಸ್ಟಾರ್ ಬ್ಯಾಟ್ಸ್‌ಮನ್ ಎಬಿಡಿ ವಿಲಿಯರ್ಸ್ 205 ಇನಿಂಗ್ಸ್‌ಗಳಲ್ಲಿ 9 ಸಾವಿರ ರನ್ ಪೂರೈಸಿದ್ದರು. ಇದೀಗ ಕೊಹ್ಲಿ 194 ಇನಿಂಗ್ಸ್‌ಗಳಲ್ಲಿ 9 ಸಾವಿರ ರನ್‌ಗಳ ಮೈಲುಗಲ್ಲನ್ನು ಮುಟ್ಟಿದ್ದಾರೆ.
ಕೊಹ್ಲಿ 83 ರನ್ ಗಳಿಸುವ ಮೂಲಕ 9 ಸಾವಿರ ರನ್ ಪೂರ್ಣಗೊಳಿಸಿದರು. 202ನೆ ಏಕದಿನ ಪಂದ್ಯವನ್ನಾಡುತ್ತಿರುವ ಕೊಹ್ಲಿ 32ನೆ ಶತಕ(113) ಗಳಿಸಿ ಔಟಾದರು.
ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ 228 ಇನಿಂಗ್ಸ್‌ಗಳಲ್ಲಿ 9 ಸಾವಿರ ರನ್ ಗಳಿಸಿದ್ದರು.
ಕೊಹ್ಲಿ 2017ರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 2,000 ರನ್ ಪೂರೈಸಿರುವ ಮೊದಲ ದಾಂಡಿಗ ಎನಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕದ ಹಾಶಿಂ ಅಮ್ಲ 1988 ಮತ್ತು ನ್ಯೂಝಿಲೆಂಡ್‌ನ ಜೋ ರೂಟ್ 1855 ರನ್ ಸಂಪಾದಿಸಿದ್ದಾರೆ.
ಕೊಹ್ಲಿ ನಾಯಕರಾಗಿಯೂ ವೇಗವಾಗಿ 5 ಸಾವಿರ ರನ್ ಪೂರ್ಣಗೊಳಿಸಿದರು. 93 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಮೈಕಲ್ ಕ್ಲಾರ್ಕ್ 109 ಇನಿಂಗ್ಸ್‌ಗಳಲ್ಲಿ ಈ 5000 ರನ್ ಮಾಡಿದ್ದರು.
ನ್ಯೂಝಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ 31ನೆ ಶತಕ ದಾಖಲಿಸಿ ಆಸ್ಟ್ರೇಲಿಯದ ಗ್ರೇಟ್ ರಿಕಿ ಪಾಂಟಿಂಗ್ ದಾಖಲೆಯನ್ನು ಮುರಿದಿದ್ದರು. ಮಾಸ್ಟರ್ ಬ್ಲಾಸ್ಟರ್ ಬಳಿಕ ಗರಿಷ್ಠ ಶತಕ ದಾಖಲಿಸಿದ ವಿಶ್ವದ ಎರಡನೆ ದಾಂಡಿಗ ಎಂಬ ಹಿರಿಮೆಗೆ ಕೊಹ್ಲಿ ಭಾಜನರಾಗಿದ್ದರು. ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ದಾಖಲಿಸಿದ್ದರು.
2016ರಲ್ಲಿ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 2595 ರನ್ ಗಳಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಕೊಹ್ಲಿ 2017ರಲ್ಲಿ 1,000 ರನ್ ಪೂರ್ಣಗೊಳಿಸಿದ ಮೊದಲ ದಾಂಡಿಗ ಎನಿಸಿಕೊಂಡಿದ್ದರು. 2017ರಲ್ಲಿ ಅವರು 2 ಟೆಸ್ಟ್ ಶತಕ ಮತ್ತು 5 ಏಕದಿನ ಶತಕ ಗಳಿಸಿದ್ದಾರೆ.
2017ರ ಆರಂಭದಲ್ಲಿ ಕೊಹ್ಲಿ ಸತತ ನಾಲ್ಕು ಟೆಸ್ಟ್ ಸರಣಿಗಳಲ್ಲಿ ದ್ವಿಶತಕದ ಸಾಧನೆ ಮಾಡಿದ್ದರು. ವಿಂಡೀಸ್ ವಿರುದ್ಧ 200, ನ್ಯೂಝಿಲೆಂಡ್ ವಿರುದ್ಧ 211, ಇಂಗ್ಲೆಂಡ್ ವಿರುದ್ಧ 235 ಮತ್ತು ಬಾಂಗ್ಲಾದೇಶದ ವಿರುದ್ಧದ ಟೆಸ್ಟ್‌ನಲ್ಲಿ 204 ರನ್ ಗಳಿಸಿದೆ.
2017ರಲ್ಲಿ ಕೊಹ್ಲಿ ನೇತೃತ್ವದಲ್ಲಿ ಭಾರತ ಸತತ 4 ಏಕದಿನ ಸರಣಿ ಗಳನ್ನು ಜಯಿಸಿದ್ದು, ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಫೈನಲ್ ತಲುಪಿತ್ತು.