×
Ad

ವಾಪಸ್ಸಾದ ನೋಟುಗಳ ಪರಿಶೀಲನೆ ಪ್ರಗತಿಯಲ್ಲಿದೆ: ಆರ್ ಬಿಐ

Update: 2017-10-29 17:25 IST

ಹೊಸದಿಲ್ಲಿ, ಅ. 29: ನರೇಂದ್ರ ಮೋದಿ ಸರ್ಕಾರ 500 ಮತ್ತು 1000 ರೂಪಾಯಿ ನೋಟುಗಳ ಚಲಾವಣೆಯನ್ನು ರದ್ದು ಮಾಡಿ ಒಂದು ವರ್ಷ ಕಳೆದರೂ, ಅತ್ಯಾಧುನಿಕ ನೋಟು ದೃಢೀಕರಣ ವ್ಯವಸ್ಥೆ ಮೂಲಕ ವಾಪಸ್ಸಾದ ನೋಟುಗಳ ಪರಿಶೀಲನೆ ಪ್ರಗತಿಯಲ್ಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪೃಶ್ನೆಗೆ, "ಇದುವರೆಗೆ 500 ರೂಪಾಯಿ ಮೌಲ್ಯದ 1,134 ಕೋಟಿ ನೋಟುಗಳು ಹಾಗೂ 1000 ರೂಪಾಯಿ ಮುಖಬೆಲೆಯ 524.90 ಕೋಟಿ ನೋಟುಗಳ ಪರಿಶೀಲನೆ ಮುಗಿದಿದೆ. ಒಟ್ಟು 5.67 ಲಕ್ಷ ಕೋಟಿ ಹಾಗೂ 5.24 ಲಕ್ಷ ಕೋಟಿ ಮೌಲ್ಯದ ನೋಟುಗಳು 2017ರ ಸೆಪ್ಟೆಂಬರ್ ಕೊನೆಯವರೆಗೆ ಮುಗಿದಿವೆ" ಎಂದು ಉತ್ತರಿಸಿದೆ.

ಪರಿಶೀಲನೆಯಾದ ನೋಟುಗಳ ಒಟ್ಟು ಮೌಲ್ಯ 10.91 ಲಕ್ಷ ಕೋಟಿ ರೂಪಾಯಿಗಳು. "ನಿರ್ದಿಷ್ಟ ಬ್ಯಾಂಕ್ ನೋಟುಗಳನ್ನು ಶ್ರದ್ಧೆಯಿಂದ ಎರಡು ಪಾಳಿಗಳಲ್ಲಿ ಲಭ್ಯವಿರುವ ಎಲ್ಲ ಯಂತ್ರಗಳ ಮೂಲಕ ಸಂಸ್ಕರಿಸಲಾಗುತ್ತಿದೆ" ಎಂದು ಪಿಟಿಐ ವರದಿಗಾರ ಕೇಳಿದ ಆರ್ ಟಿಐ ಪ್ರಶ್ನೆಗೆ ಆರ್‍ ಬಿಐ ಉತ್ತರಿಸಿದೆ.

ಇದುವರೆಗೆ ಎಣಿಕೆ ಮಾಡಲಾದ ನೋಟುಗಳ ಸಂಖ್ಯೆ ಬಗ್ಗೆ ಪ್ರಶ್ನಿಸಲಾಗಿತ್ತು. ಇದಕ್ಕೆ ನಿಗದಿತ ಗಡುವು ವಿಧಿಸಲಾಗಿದೆಯೇ ಎಂಬ ಪ್ರಶ್ನೆಗೆ ಇದು ನಿರಂತರ ಪ್ರಕ್ರಿಯೆ ಎಂದು ಆರ್‍ ಬಿಐ  ಉತ್ತರಿಸಿದೆ. ನೋಟುಗಳ ಎಣಿಕೆಗೆ 66 ಅತ್ಯಾಧುನಿಕ ನೊಟು ದೃಢೀಕರಣ ಮತ್ತು ಸಂಸ್ಕರಣಾ ಯಂತ್ರಗಳನ್ನು ಬಳಸಲಾಗುತ್ತಿದೆ ಎಂದು ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News