431 ಮಂದಿ ಪಾಕಿಸ್ತಾನಿ ಹಿಂದೂಗಳಿಗೆ ದೀರ್ಘಾವಧಿ ವೀಸಾ
ಹೊಸದಿಲ್ಲಿ, ಅ. 29: 431 ಮಂದಿ ಪಾಕಿಸ್ತಾನಿ ಹಿಂದೂಗಳಿಗೆ ಭಾರತ ಸರ್ಕಾರ ದೀರ್ಘಾವಧಿ ವೀಸಾ ಒದಗಿಸಿದೆ. ಈ ಮೂಲಕ ಇವರು ಕಾಯಂ ಖಾತೆ ಸಂಖ್ಯೆ (ಪಾನ್) ಹಾಗೂ ಆಧಾರ್ ಕಾರ್ಡ್ ಪಡೆಯಲು ಮತ್ತು ಭಾರತದಲ್ಲಿ ಆಸ್ತಿ ಖರೀದಿಸಲು ಅವಕಾಶವಾಗಲಿದೆ ಎಂದು ಗೃಹ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನ ಜತೆಗಿನ ಭಾರತದ ಸಂಬಂಧ ಹದಗೆಟ್ಟಿದ್ದರೂ, ಪಾಕಿಸ್ತಾನ, ಅಪ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ಕಿರುಕುಳ ಎದುರಿಸುತ್ತಿರುವ ಅಲ್ಪ ಸಂಖ್ಯಾತರಿಗೆ ಸಹಾಯಹಸ್ತ ಚಾಚುವ ನರೇಂದ್ರ ಮೋದಿ ಸರ್ಕಾರದ ನೀತಿಗೆ ಅನುಗುಣವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
"ಗೃಹ ಸಚಿವಾಲಯ ಕಳೆದ ತಿಂಗಳ 431 ಮಂದಿ ಪಾಕಿಸ್ತಾನಿಗಳಿಗೆ ಧೀರ್ಘಾವಧಿ ವೀಸಾ ನೀಡಲಾಗಿದೆ. ಇವರೆಲ್ಲರೂ ಪಾಕಿಸ್ತಾನದ ಅಲ್ಪಸಂಖ್ಯಾತರು" ಎಂದು ಉನ್ನತ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.
ಪಾಕಿಸ್ತಾನ, ಅಪ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂ, ಸಿಕ್ಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ನರು ಭಾರತದಲ್ಲಿ ದೀರ್ಘಾವಧಿ ವೀಸಾ ಸೌಲಭ್ಯದಡಿ ವಾಸವಿದ್ದರೆ, ಜೀವನಾಧಾರಕ್ಕೆ ಸಾಕಾಗುವಷ್ಟು ಭೂಮಿ ಖರೀದಿಸಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಇತ್ತಿಚೆಗೆ ಪ್ರಕಟಿಸಿತ್ತು.