100ನೆ ವಯಸ್ಸಿನಲ್ಲಿ ಮತ್ತೆ ಮತ ಚಲಾಯಿಸಲಿರುವ ಸ್ವತಂತ್ರ ಭಾರತದ ಮೊದಲ ಮತದಾರ
ಶಿಮ್ಲಾ, ಅ. 29: ಸ್ವತಂತ್ರ ಭಾರತದ ಮೊಟ್ಟಮೊದಲ ಮತದಾರ ಶ್ಯಾಮಶರಣ್ ನೇಗಿಯವರು ತಮ್ಮ 100ನೆ ವಯಸ್ಸಿನಲ್ಲಿ ಹಿಮಾಚಲ ಪ್ರದೇಶ ವಿಧಾನಸಭೆಗೆ ನವೆಂಬರ್ 9ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅನುವಾಗುವಂತೆ ಚುನಾವಣಾ ಆಯೋಗ ವಿಶೇಷ ಸಿದ್ಧತೆ ಮಾಡಿಕೊಂಡಿದೆ.
ಶತಾಯುಷಿ ನೇಗಿಯವರಿಗೆ ತಮ್ಮ 100ನೆ ವಯಸ್ಸಿನಲ್ಲಿ ನಡೆದಾಡುವುದೂ ಕಷ್ಟ. ಈ ಹಿನ್ನೆಲೆಯಲ್ಲಿ ಕಿನ್ನೂರ್ ಜಿಲ್ಲಾಡಳಿತ ಅವರಿಗೆ ಮತಗಟ್ಟೆಗೆ ತೆರಳಲು ಮತ್ತು ಮನೆಗೆ ವಾಪಾಸು ಕರೆ ತರಲು ವಿಶೇಷ ವಾಹನವನ್ನು ಒದಗಿಸಲಿದೆ. ಮತಗಟ್ಟೆಯಲ್ಲಿ, ನೇಗಿಯವರಿಗೆ ಭವ್ಯ ಸ್ವಾಗತ ಕೋರಲು ಸಿದ್ಧತೆ ನಡೆದಿದೆ.
ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆದಾಗ, ಚುನಾವಣಾ ಆಯೋಗ ಮತದಾನದ ಅವಧಿಯನ್ನು ಹಿಂದೂಡಿತ್ತು. ಕಠಿಣ ಚಳಿ ಹಾಗೂ ಹಿಮಪಾತದ ಕಾರಣದಿಂದ ಈ ಕ್ರಮ ಕೈಗೊಂಡಿತ್ತು. ದೇಶದ ಇತರ ಭಾಗಗಳಲ್ಲಿ 1952ರ ಜನವರಿ ಹಾಗೂ ಫೆಬ್ರವರಿಯಲ್ಲಿ ಮತದಾನ ನಡೆದಿತ್ತು.
ಈ ಕಾರಣದಿಂದ 1951ರ ಅಕ್ಟೋಬರ್ 25ರಂದು ಸ್ವತಂತ್ರ್ಯ ಭಾರತದಲ್ಲಿ ಮಂಡಿ- ಮಹಾಸು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದ ಮೊದಲ ಮತದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಚಿನಿ ಮತಗಟ್ಟೆಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಿದ್ಧಪಡಿಸಿತ್ತು. ಆಗ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ಅವರು, 1975ರಲ್ಲಿ ನಿವೃತ್ತರಾಗಿದ್ದರು.
"ಇದುವರೆಗೆ ಒಂದು ಮತದಾನವನ್ನೂ ತಪ್ಪಿಸಿಕೊಳ್ಳದ ಇವರು ಎಲ್ಲರಿಗೆ ಸ್ಫೂರ್ತಿ" ಎಂದು ಸೊಸೆ ಸುರ್ಮಾ ದೇವಿ ಹೇಳಿದ್ದಾರೆ. ಗೂಗಲ್ ತನ್ನ #ಪ್ಲೆಜ್ ಟು ಟುವೋಟ್ ಅಭಿಯಾನಕ್ಕೆ ನೇಗಿಯವರ ವೀಡಿಯೊ ಸಿದ್ಧಪಡಿಸಿದ ಬಳಿಕ ಅವರ ಹೆಸರು ಜನಜನಿತವಾಗಿತ್ತು. ಇದರಲ್ಲಿ ಅವರು ಮೊದಲ ಮತದಾನದ ಬಗ್ಗೆ ನೇಗಿ ವಿವರ ನೀಡಿದ್ದರು.