40,000 ಕೋ.ರೂ.ಗಳ ಮೆಗಾ ಖರೀದಿ ಯೋಜನೆಯನ್ನು ಅಂತಿಮಗೊಳಿಸಿದ ಸೇನೆ

Update: 2017-10-29 15:11 GMT

ಹೊಸದಿಲ್ಲಿ,ಅ.29: ತನ್ನ ಪದಾತಿದಳದ ಆಧುನೀಕರಣಕ್ಕಾಗಿ ಭಾರತೀಯ ಸೇನೆಯು ಬೃಹತ್ ಖರೀದಿ ಯೋಜನೆಯೊಂದನ್ನು ಅಂತಿಮಗೊಳಿಸಿದೆ. ಇದರಡಿ ಅದು ತನ್ನ ಬಳಿಯಿರುವ ಹಳೆಯ ಓಬಿರಾಯನ ಕಾಲದ ಶಸ್ತ್ರಾಸ್ತ್ರಗಳ ಬದಲಿಗೆ ಸುಮಾರು 40,000 ಕೋ.ರೂ.ಗಳ ವೆಚ್ಚದಲ್ಲಿ 44,000 ಹಗುರ ಮಷಿನ್‌ಗನ್(ಎಲ್‌ಎಂಜಿ)ಗಳು, 44,600 ಕಾರ್ಬೈನ್‌ಗಳು ಮತ್ತು 7ಲಕ್ಷ ಅಸಾಲ್ಟ್ ರೈಫಲ್‌ಗಳನ್ನು ಖರೀದಿಸಲಿದೆ. ರಕ್ಷಣಾ ಸಚಿವಾಲಯವು ಇದಕ್ಕೆ ಸಹಮತ ಸೂಚಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು.

ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಭಾರತದ ಗಡಿಗಳು ಸೇರಿದಂತೆ ಭದ್ರತಾ ಬೆದರಿಕೆಗಳ ಹಿನ್ನೆಲೆಯಲ್ಲಿ ವಿವಿಧ ಶಸ್ತ್ರಾಸ್ತ್ರಗಳ ಖರೀದಿಯನ್ನು ತ್ವರಿತಗೊಳಿಸುವಂತೆ ಸೇನೆಯು ಆಗ್ರಹಿಸುತ್ತಲೇ ಇದೆ.

ಖರೀದಿ ಪ್ರಕ್ರಿಯೆಗೆ ಚಾಲನೆ ನೀಡುವುದರೊಂದಿಗೆ ಸರಕಾರವು ಎಲ್‌ಎಂಜಿಯಂತಹ ಲಘು ಶಸ್ತ್ರಾಸ್ತ್ರಗಳ ಕುರಿತು ತನ್ನ ಕಾರ್ಯಕ್ಕೆ ಇನ್ನಷ್ಟು ವೇಗ ನೀಡುವಂತೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ)ಗೂ ತಿಳಿಸಿದೆ.

 ಎಲ್‌ಎಂಜಿಗಳ ಖರೀದಿ ಪ್ರಕ್ರಿಯೆ ಮುಂದಿನ ಕೆಲವು ದಿನಗಳಲ್ಲಿ ಆರಂಭಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಕೆಲವು ತಿಂಗಳುಗಳ ಹಿಂದೆ ಸರಣಿ ಕ್ಷೇತ್ರ ಪ್ರಯೋಗಗಳ ಬಳಿಕ ಓರ್ವನೇ ಮಾರಾಟಗಾರ ಉಳಿದುಕೊಂಡಿದ್ದರಿಂದ ರಕ್ಷಣಾ ಸಚಿವಾಲಯವು ಎಲ್‌ಎಂಜಿ ಖರೀದಿಗಾಗಿ ಕರೆಯಲಾಗಿದ್ದ ಟೆಂಡರ್‌ನ್ನು ರದ್ದುಗೊಳಿಸಿತ್ತು.

 ನೂತನ ಅಸಾಲ್ಟ್ ರೈಫಲ್‌ಗಳ ಮಾನದಂಡಗಳನ್ನೂ ಸೇನೆಯು ಅಂತಿಮಗೊಳಿಸಿದ್ದು, ಖರೀದಿಗಳಿಗೆ ಸಂಬಂಧಿಸಿದಂತೆ ನಿರ್ಧಾರಗಳನ್ನು ಕೈಗೊಳ್ಳುವ ರಕ್ಷಣಾ ಸಚಿವಾಲಯದ ರಕ್ಷಣಾ ಖರೀದಿ ಮಂಡಳಿಯು ತುಂಬ ಅಗತ್ಯವಾಗಿರುವ ಈ ಖರೀದಿಗೆ ಶೀಘ್ರವೇ ಹಸಿರು ನಿಶಾನೆಯನ್ನು ತೋರಿಸುವ ನಿರೀಕ್ಷೆಯಿದೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News