ಜಮ್ಮು-ಕಾಶ್ಮೀರ: ಎನ್‌ಎಚ್‌ಪಿಸಿ ದಾಖಲೆಗಳ ಬಹಿರಂಗಕ್ಕೆ ಸಿಐಸಿ ನಕಾರ

Update: 2017-10-31 12:48 GMT

ಹೊಸದಿಲ್ಲಿ,ಅ.31: ಜಮ್ಮು-ಕಾಶ್ಮೀರದಲ್ಲಿಯ ಏಳು ರಾಷ್ಟ್ರೀಯ ಜಲವಿದ್ಯುತ್ ನಿಗಮ(ಎನ್‌ಎಚ್‌ಪಿಸಿ) ಯೋಜನೆಗಳನ್ನು ರಾಜ್ಯ ಸರಕಾರಕ್ಕೆ ಹಸ್ತಾಂತರಿಸಬೇಕೆಂಬ ಬೇಡಿಕೆಯ ಕುರಿತು ಚರ್ಚೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಆರ್‌ಟಿಐ ಅರ್ಜಿಯನ್ನು ಕೇಂದ್ರ ಮಾಹಿತಿ ಆಯೋಗ(ಸಿಐಸಿ)ವು ತಿರಸ್ಕರಿಸಿದೆ. ತನ್ನ ನಿರಾಕರಣೆಗೆ ‘ವಾಣಿಜ್ಯಿಕ ಗೋಪ್ಯತೆ’ ಮತ್ತು ‘ಥರ್ಡ್ ಪಾರ್ಟಿ ಅಥವಾ ಅನ್ಯ ವ್ಯಕ್ತಿ’ ವಿನಾಯಿತಿ ನಿಬಂಧನೆಗಳನ್ನು ಅದು ಉಲ್ಲೇಖಿಸಿದೆ.

ಜಲವಿದ್ಯುತ್ ಯೋಜನೆಗಳ ಮರುಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರಕಾಗಳ ನಡುವಿನ ಮಾತುಕತೆಗಳ ವಿವರ, ಪ್ರಸ್ತಾವದ ಕಾರ್ಯಸಾಧ್ಯತೆ ಮತ್ತು ಕಡತ ಟಿಪ್ಪಣಿಗಳನ್ನು ಕೋರಿ ಆರ್‌ಟಿಐ ಕಾರ್ಯಕರ್ತ ವೆಂಕಟೇಶ ನಾಯಕ್ ಎನ್ನುವವರು ಸಲ್ಲಿಸಿದ್ದ ಅರ್ಜಿಗೆ ಈ ಪ್ರಕರಣವು ಸಂಬಂಧಿಸಿದೆ.

ಜಮ್ಮು-ಕಾಶ್ಮೀರ ಸರಕಾರವು 2000ನೇ ಸಾಲಿನಲ್ಲಿ ಕೇಂದ್ರದೊಂದಿಗೆ ಒಡಂಬಡಿ ೆಯೊಂದಕ್ಕೆ ಸಹಿ ಮಾಡಿದ್ದು, ಹಣಕಾಸು ಪೂರೈಕೆ, ಕಾರ್ಯಾರಂಭ ಮತ್ತು ನಿರ್ವಹಣೆಗಾಗಿ 10 ವರ್ಷಗಳ ಅವಧಿಗೆ ಎನ್‌ಎಚ್‌ಪಿಸಿಗೆ ರಾಜ್ಯದಲ್ಲಿಯ ಏಳು ಜಲ ವಿದ್ಯುತ್ ಯೋಜನೆಗಳ ಹಸ್ತಾಂತರವನ್ನು ಅದರಲ್ಲಿ ಉಲ್ಲೇಖಿಸಲಾಗಿತ್ತು ಎಂದು ನಾಯಕ್ ತಿಳಿಸಿದರು.

 ಪ್ರಕರಣದ ವಿವರಗಳನ್ನು ನೀಡಿದ ಅವರು, ಈ ಯೋಜನೆಗಳನ್ನು ರಾಜ್ಯಕ್ಕೆ ಮರಳಿಸಲು ಪರಸ್ಪರ ಸ್ವೀಕಾರಾರ್ಹ ವಿಧಿವಿಧಾನಗಳನ್ನು ರೂಪಿಸಲು ಉಭಯ ಸರಕಾರಗಳು ಒಪ್ಪಿಕೊಂಡಿದ್ದವು ಎಂದರು.

ನಾಯಕ್ ಅವರು ಕೇಂದ್ರ ವಿದ್ಯುತ್ ಸಚಿವಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ಸಾರ್ವಜನಿಕ ಕ್ಷೇತ್ರದ ಉದ್ಯಮವಾಗಿರುವ ಎನ್‌ಎಚ್‌ಪಿಸಿಗೆ ವರ್ಗಾಯಿಸಲಾಗಿತ್ತು ಮತ್ತು ಅದು ಅಪೇಕ್ಷಿತ ಮಾಹಿತಿಗಳನ್ನು ಒದಗಿಸಲು ನಿರಾಕರಿಸಿತ್ತು. ಎನ್‌ಎಚ್‌ಪಿಸಿ ಶೇರು ವಿನಿಮಯ ಕೇಂದ್ರಗಳಲ್ಲಿ ನೋಂದಾಯಿತ ಕಂಪನಿಯಾಗಿದ್ದು, ಈ ದಾಖಲೆಗಳ ಬಹಿರಂಗವು ಶೇರುದಾರರಲ್ಲಿ ಅನಗತ್ಯ ಊಹಾಪೋಹ ಮತ್ತು ಗೊಂದಲಗಳಿಗೆ ಕಾರಣವಾಗುತ್ತದೆ ಮತ್ತು ಕಂಪನಿಯ ವಾಣಿಜ್ಯಿಕ ಗೋಪ್ಯತೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂದು ಉತ್ತರದಲ್ಲಿ ತಿಳಿಸಲಾಗಿತ್ತು.

ಇದೇ ಕಾರಣದಿಂದ ವಾಣಿಜ್ಯಿಕ ಗೋಪ್ಯತೆ ಮತ್ತು ಥರ್ಡ್ ಪಾರ್ಟಿಗೆ ಸಂಬಂಧಿತ ಆರ್‌ಟಿಐ ಕಾಯ್ದೆಯ ಕಲಮ್‌ಗಳಡಿ ಅರ್ಜಿಯಲ್ಲಿ ಕೋರಲಾಗಿರುವ ವಿವರಗಳು ಬಹಿರಂಗಗೊಳಿಸುವುದರಿಂದ ವಿನಾಯಿತಿ ಹೊಂದಿವೆ ಎಂದು ಕೇಂದ್ರ ಮಾಹಿತಿ ಆಯಕ್ತ ಸುಧೀರ ಭಾರ್ಗವ ತಿಳಿಸಿದ್ದಾರೆ.

 ಸಿಐಸಿಯ ನಿರ್ಧಾರವನ್ನು ಪ್ರಶ್ನಿಸಿದ ನಾಯಕ್, ತನ್ನ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿಯ ಮೂಲಕ ಆರ್‌ಟಿಐ ಅಡಿ ಅರ್ಜಿಯನ್ನು ಸ್ವೀಕರಿಸುವ ಮತ್ತು ಅದರ ಕುರಿತು ನಿರ್ಧಾರ ಕೈಗೊಳ್ಳುವ ಸರಕಾರಿ ಪ್ರಾಧಿಕಾರವು ‘ಸೆಕೆಂಡ್ ಪಾರ್ಟಿ’ಯಾಗಿರು ವುದರಿಂದ ‘ಥರ್ಡ್ ಪಾರ್ಟಿ’ನಿಬಂಧನೆಯು ಇಲ್ಲಿ ಅನ್ವಯಿಸುವುದಿಲ್ಲ. ಅಂತಹ ಅಧಿಕಾರಿಯನ್ನು ಥರ್ಡ್ ಪಾರ್ಟಿ ಎಂದು ಪರಿಗಣಿಸುವ ಪ್ರವೃತ್ತಿ ಮುಂದುವರಿದರೆ ಸರಕಾರಿ ಕಚೇರಿಯ ಯಾವುದೇ ಹಿರಿಯ ಅಧಿಕಾರಿಯು ಪ್ರತಿ ಆರ್‌ಟಿಐ ಅರ್ಜಿಗೂ ತಾನು ಥರ್ಡ್ ಪಾರ್ಟಿ ಎಂದು ಪ್ರತಿಪಾದಿಸಬಹುದು ಮತ್ತು ದಾಖಲೆಗಳನ್ನು ಬಹಿರಂಗಗೊಳಿಸಲು ತಡೆಯೊಡ್ಡಬಹುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News