ಗಂಡನನ್ನು ಕೊಲ್ಲಲು ಹೋಗಿ 13 ಜನರ ಸಾವಿಗೆ ಕಾರಣಳಾದಳು!
ಮುಲ್ತಾನ್ (ಪಾಕಿಸ್ತಾನ), ಅ. 31: ಬಲವಂತಕ್ಕೆ ಮದುವೆಯಾದ ಮಹಿಳೆಯೊಬ್ಬಳು ಗಂಡನನ್ನು ಕೊಲ್ಲಲು ವಿಷ ಬೆರೆಸಿದ ಹಾಲು ನೀಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಆದರೆ, ಆ ಹಾಲನ್ನು ಗಂಡ ಕುಡಿದಿಲ್ಲ. ಬದಲಾಗಿ ಅದನ್ನು ಮೊಸರಿಗೆ ಹಾಕಿ ಮನೆಮಂದಿಯೆಲ್ಲ ತಿಂದಿದ್ದಾರೆ. ಅಂತಿಮವಾಗಿ ಗಂಡ ಮತ್ತು ಆತನ ಮನೆಯ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಕೊಲೆ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಮುಝಫ್ಫರ್‌ಗಡ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದರು.
ಆಸಿಯಾ ಬೀಬಿಯ ಮದುವೆ ಸೆಪ್ಟಂಬರ್‌ನಲ್ಲಿ ಆಗಿತ್ತು. ಕಳೆದ ವಾರ ಆಕೆ ಗಂಡನಿಗೆ ಕುಡಿಯಲು ವಿಷ ಬೆರೆಸಿದ ಹಾಲು ಕೊಟ್ಟಳು. ಆದರೆ ಆಗ ಅದನ್ನು ಆತ ಕುಡಿಯಲಿಲ್ಲ. ಬಳಿಕ ಅದನ್ನು ಮೊಸರಿಗೆ ಬೆರೆಸಿ ಮನೆಮಂದಿಗೆಲ್ಲ ನೀಡಲಾಯಿತು.
ಈವರೆಗೆ ಗಂಡ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ ಹಾಗೂ 14 ಮಂದಿದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
‘‘ಪೊಲೀಸರು ಆಸಿಯಾ ಬೀಬಿ, ಆಕೆಯ ಪ್ರಿಯಕರ ಮತ್ತು ಆತನ ಚಿಕ್ಕಮ್ಮನನ್ನು ಕೊಲೆ ಆರೋಪದಲ್ಲಿ ಬಂಧಿಸಿದ್ದಾರೆ’’ ಎಂದು ಅಹ್ಮದ್ ತಿಳಿಸಿದರು.