ಪತಂಜಲಿ ಫುಡ್ ಪಾರ್ಕ್ ನೌಕರರ ವಜಾ ವಿರುದ್ಧ ಪ್ರತಿಭಟನೆ
ತೇಜಪುರ(ಅಸ್ಸಾಂ),ಅ.31: ಸೋನಿತ್‌ಪುರ ಜಿಲ್ಲೆಯ ಘೋರಮರಿಯಲ್ಲಿ 1,300 ಕೋ.ರೂ.ವೆಚ್ಚದಲ್ಲಿ ತಲೆಯೆತ್ತುತ್ತಿರುವ ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಮೆಗಾ ಹರ್ಬಲ್ ಫುಡ್ ಪಾರ್ಕ್‌ನ ನೌಕರರು ತಮ್ಮ ಬದಲಿಗೆ ಹೊರಗಿನವರನ್ನು ನೇಮಿಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಮಂಗಳವಾರ ಪಾರ್ಕ್‌ನ ಮುಖ್ಯ ಪ್ರವೇಶದ್ವಾರದೆದುರು ಪ್ರತಿಭಟನೆಯನ್ನು ನಡೆಸಿದರು.
ತಮ್ಮನ್ನು ಇಂದಿನಿಂದ ಕೆಲಸದಿಂದ ಮುಕ್ತಗೊಳಿಸಲಾಗಿದೆ ಮತ್ತು ತಮ್ಮ ಬದಲಿಗೆ ರಾಜ್ಯದ ಹೊರಗಿನ ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಪ್ರತಿಭಟನಾ ನಿರತ 85 ಕಾರ್ಮಿಕರು ಆರೋಪಿಸಿದರು. ನ್ಯಾಯವನ್ನು ಕೋರಿ ಸೋನಿತ್‌ಪುರ ಜಿಲ್ಲಾಡಳಿತಕ್ಕೆ ಅಹವಾಲೊಂದನ್ನು ಅವರು ಸಲ್ಲಿಸಿದರು.
ಹೊಸದಾಗಿ ನೇಮಕಗೊಂಡವರು ಅಸ್ಸಾಂ ರಾಜ್ಯದ ಹೊರಗಿನವರಲ್ಲ. ಈ 85 ಜನರು ಖಾಸಗಿ ಸುರಕ್ಷತಾ ಸಂಸ್ಥೆಯ ಮೂಲಕ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಸೇವೆಯು ತೃಪ್ತಿಕರವಾಗಿರದ್ದರಿಂದ ಪತಂಜಲಿಯು ತನ್ನದೇ ಆದ ಭದ್ರತಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದೆ ಮತ್ತು ಅವರೆಲ್ಲ ಅಸ್ಸಾಂ ರಾಜ್ಯದವರೇ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಮನೋಜ ಕುಮಾರ ಢೇಕಾ ತಿಳಿಸಿದರು.