ಪ್ರಶಸ್ತಿ ತಿರಸ್ಕಾರ ಮನೋಭಾವ ಶಾನುಭಾಗ್‌ರ ಗುಣದ ಪ್ರತಿಬಿಂಬ: ಪ್ರಮೋದ್

Update: 2017-11-01 08:11 GMT

 ಉಡುಪಿ, ನ.1: ರಾಜ್ಯದ ಆರು ಕೋಟಿ ಜನರನ್ನು ಪ್ರತಿನಿಧಿಸುವ ರಾಜ್ಯ ಸರಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸುವ ಮನೋಭಾವವು ಅವರ ಗುಣದ ಪ್ರತಿಬಿಂಬವಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಹಿರಿಯ ನಾಗರಿಕರ ಪರ ಹೋರಾಟಗಾರ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ್ ಶ್ಯಾನುಭಾಗ್ ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸಿರುವ ಮತ್ತು ಆಯ್ಕೆ ಆದೇಶವನ್ನು ಸರಕಾರ ರದ್ದುಗೊಳಿಸಿರುವ ಕುರಿತು ಇಂದು ಉಡುಪಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಸಚಿವರು ಈ ರೀತಿ ಪ್ರತಿಕ್ರಿಯೆ ನೀಡಿದರು.

ಈ ಪ್ರಶಸ್ತಿಗಾಗಿ ರಾಜ್ಯದಲ್ಲಿ 3,500ದಿಂದ 4,000 ಜನ ಅರ್ಜಿ ಹಾಕಿದ್ದು, ಇಷ್ಟು ಪೈಪೋಟಿ ಇರುವಾಗ ರಾಜ್ಯ ಸರಕಾರ ನೀಡಿರುವ ಪ್ರಶಸ್ತಿಯನ್ನು ತಿರಸ್ಕರಿಸಿರುವುದು ಸರಿಯಲ್ಲ. ಶ್ಯಾನುಭಾಗ್‌ರು ಅರ್ಜಿ ಹಾಕದಿದ್ದರೂ ಇಲಾಖೆಗಳು ಅವರ ಬಯೋಡಾಟಾವನ್ನು ಕಳುಹಿಸಿಕೊಟ್ಟಿತ್ತು. ನಿನ್ನೆ ಸಚಿವೆ ಉಮಾಶ್ರೀ ನನಗೆ ದೂರವಾಣಿ ಕರೆ ಮಾಡಿ ಈ ವಿಚಾರ ತಿಳಿಸಿದ್ದರು. ಅದಕ್ಕೆ ನಾನು ಅವರಿಗೆ ಆಸಕ್ತಿ ಇಲ್ಲದಿದ್ದರೆ ಬೇರೆಯವರಿಗೆ ಕೊಡಿ ಅಂತ ತಿಳಿಸಿದ್ದೆ ಎಂದರು.

ಹಿರಿಯ ನಾಗರಿಕರ ಬೇಡಿಕೆಗಳ ಬಗ್ಗೆ ಶ್ಯಾನುಭಾಗರೇ ಹೇಳಿದ್ದು ಸರಿ ಅಂತ ಹೇಳಲು ಆಗುವುದಿಲ್ಲ. ನಾನು ಕೂಡ ಎರಡು ಸಭೆಯಲ್ಲಿ ಸಹಾಯಕ ಆಯುಕ್ತರಿಗೆ ಹಿರಿಯ ನಾಗರಿಕರ ಆಸ್ತಿಯನ್ನು ಮಕ್ಕಳು ಕಬಳಿಸುವ ಬಗ್ಗೆ ಬೇಕಾದಷ್ಟು ಆದೇಶ ನೀಡಿದ್ದೆ. ಆಸ್ತಿ ವಿಚಾರದಲ್ಲಿ ಹಿರಿಯ ನಾಗರಿಕರು ಮೊದಲು ತಮ್ಮ ಮಕ್ಕಳಿಗೆ ಒಪ್ಪಿಗೆ ಕೊಟ್ಟು, ನಂತರ ಅದನ್ನು ವಾಪಸ್ ತೆಗೆದುಕೊಳ್ಳುತ್ತಾರೆ. ಹಾಗಾಗಿ ಇದು ಮಕ್ಕಳು ಮತ್ತು ತಂದೆತಾಯಿಯರ ಮಧ್ಯೆ ಇರುವ ಭಿನ್ನಾಭಿಪ್ರಾಯದ ಪ್ರಶ್ನೆಯಾಗಿದೆ. ಅದನ್ನು ಅಷ್ಟು ಸುಲಭದಲ್ಲಿ ಸರಿ ಮಾಡಲು ಆಗಲ್ಲ. ಸಾಕಷ್ಟು ಪರಿಶೀಲನೆ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದರು.

ನಿರ್ದಿಷ್ಟ ಸಮಯದಲ್ಲಿಯೇ ಹಿರಿಯ ನಾಗರಿಕರ ಸಮಸ್ಯೆ ಪರಿಹಾರ ಆಗಬೇಕು ಎಂದು ಹೇಳಿದರೆ ಆಗುವುದಿಲ್ಲ. ಕಂದಾಯ ಇಲಾಖೆಯಲ್ಲಿ 13 ವರ್ಷಗಳ ಹಿಂದಿನ ಕಡತಗಳೇ ಬಾಕಿ ಇದೆ. ಸಮುದ್ರದಂತೆ ಇರುವ ಕಂದಾಯ ಇಲಾಖೆಯಲ್ಲಿ ಕೆಲಸ ಕಾರ್ಯ ವಿಳಂಬ ಆಗುವುದು ಸಹಜ. ಶಾನುಭಾಗ್‌ರಿಗೆ ದೇವರು ಸ್ವಲ್ಪ ತಾಳ್ಮೆಯನ್ನು ಕೊಡಬೇಕು ಎಂದು ಸಚಿವರು ಹೇಳಿದರು.

ಹಿಂದಿನ ಉಡುಪಿ ಜಿಲ್ಲಾಧಿಕಾರಿ ಹಾಗೂ ದ.ಕ. ಜಿಲ್ಲಾಧಿಕಾರಿ ಶ್ಯಾನು ಭಾಗ್‌ರ ಪತ್ರಕ್ಕೆ ಪ್ರತಿಕ್ರಿಯಿಸದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಪ್ರಶ್ನೆಯನ್ನು ಆಯಾ ಜಿಲ್ಲಾಧಿಕಾರಿಗಳಲ್ಲಿಯೇ ಕೇಳಬೇಕು. ನನಗೆ ಯಾವುದೇ ಪತ್ರ ಬಂದರೂ ನಾನು ಉತ್ತರ ಕೊಡುತ್ತೇನೆ. ಚುನಾವಣೆಗೆ ನಿಲ್ಲುವ ನಾವು ಜನರ ಸಮಸ್ಯೆಗೆ ಸ್ಪಂದಿಸಲೇಬೇಕಾಗುತ್ತದೆ. ಆದರೆ ಅಧಿಕಾರಿಗಳು ಯಾವ ರೀತಿ ಸ್ಪಂದನೆ ಮಾಡುತ್ತಾರೆ ಎಂಬುದು ಅವರಿಗೆ ಬಿಟ್ಟ ವಿಚಾರ ಎಂದರು.

ನಾನು ರವೀಂದ್ರನಾಥ್ ಶಾನುಭಾಗ್‌ರ ಹೊರಾಟಕ್ಕೆ ಎಂದಿಗೂ ಬೆಂಬಲ ನೀಡುತ್ತೇನೆ. ಬಡವರ, ಕಷ್ಟದಲ್ಲಿರುವವರ ಪರವಾಗಿ ಮಾಡುವ ಅವರ ಹೋರಾಟದ ಜೊತೆ ನಾನು ಕೂಡ ಇರುತ್ತೇನೆ. ಆದರೆ ಅವರ ಹೋರಾಟದ ಮಾರ್ಗ ಮಾತ್ರ ತುಂಬಾ ವೇಗ ಇದೆ. ಆದರೆ ನಾನು ಸ್ವಲ್ಪ ನಿಧಾನ. ಹಾಗಾಗಿ ಅವರ ವೇಗ ನಮಗೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ ಎಂದು ಅವರು ತಿಳಿಸಿದರು.

ಪ್ರತ್ಯೇಕ ಕನ್ನಡ ಧ್ವಜ ಹಾರಿಸುವ ಕುರಿತ ಪ್ರಶ್ನೆಗೆ, ಕನ್ನಡ ಧ್ವಜ ಹಾರಿಸಬೇಕೆಂಬ ಸರಕಾರದ ಆದೇಶ ನಮಗೆ ಬಂದಿಲ್ಲ. ಬಂದಿದ್ದರೆ ನಾವು ಕೂಡ ಹಾರಿಸುತ್ತಿದ್ದೆವು. ಕನ್ನಡ ಧ್ವಜದ ಬಗ್ಗೆ ಮುಖ್ಯಮಂತ್ರಿ ತೆಗೆದುಕೊಳ್ಳುವ ನಿಲುವು ನಮ್ಮ ನಿಲುವು ಆಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News