ಗಾಂಧಿ ಹಂತಕ ಗೋಡ್ಸೆ ಜಯಂತಿ ಆಚರಣೆಗೆ ಅಭಿಪ್ರಾಯ ಸಂಗ್ರಹಿಸುತ್ತಿರುವ ಫೇಸ್ಬುಕ್ ಪೇಜ್!

Update: 2017-11-01 07:23 GMT

ಮಂಗಳೂರು, ನ.1: ‘ವೀರ ಕೇಸರಿ’ ಎಂಬ ಫೇಸ್ಬುಕ್ ಪೇಜೊಂದು ‘ಗೋಡ್ಸೆ ಜಯಂತಿ ಮಾಡಬೇಕೆ?, ಬೇಡವೇ?’ ಎನ್ನುವ ಪೋಸ್ಟೊಂದನ್ನು ಹಾಕುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದೆ.

ಈ ಹಿಂದೆ ಕೋಮು ಪ್ರಚೋದನಕಾರಿ ಪೋಸ್ಟ್ ಗಳಿಂದ ವಿವಾದಕ್ಕೀಡಾಗಿದ್ದ ‘ವೀರ ಕೇಸರಿ’ ಪೇಜ್ ಈ ಬಾರಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆಯ ಜಯಂತಿ ಆಚರಿಸಲು ಫೇಸ್ಬುಕ್ ಬಳಕೆದಾರರದಿಂದ ಅಭಿಪ್ರಾಯ ಕೇಳುತ್ತಾ ಸಾಮಾಜಿಕ ಜಾಲತಾಣದ ದುರ್ಬಳಕೆ ಮಾಡುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ವೀರ ಕೇಸರಿ’ ಪೇಜ್ ನ ಈ ಪೋಸ್ಟ್ ಗೆ ಪೇಜ್ ನ ಹಲವು ಬೆಂಬಲಿಗರಿಂದ ಗೋಡ್ಸೆ ಜಯಂತಿ ಆಚರಿಸಬೇಕು ಎನ್ನುವ ಪ್ರತಿಕ್ರಿಯೆಗಳೂ ಬಂದಿವೆ. ಇಷ್ಟೇ ಅಲ್ಲದೆ ಗಾಂಧೀಜಿಯವರ ತಿರುಚಿದ ಚಿತ್ರಗಳನ್ನು ಪೋಸ್ಟ್ ಮಾಡಿರುವ ದೀಪಕ್ ಗೌಡ ಎಂಬಾತ ತನ್ನ ವಿಕೃತಿಯನ್ನು ಮೆರೆದಿದ್ದಾನೆ,

ಮತ್ತೋರ್ವ ಫೇಸ್ಬುಕ್ ಬಳಕೆದಾರನೊಬ್ಬ “ಗಾಂಧಿ ನಿಮಗೆ ಒಳ್ಳೆಯದು ಮಾಡಿದರೆ ಗೋಡ್ಸೆ ನಮಗೆ ಒಳ್ಳೆಯದು ಮಾಡಿದ್ದಾರೆ” ಎಂದು ಗಾಂಧಿ ಹತ್ಯೆಯನ್ನು ಪರೋಕ್ಷವಾಗಿ ಬೆಂಬಲಿಸಿದ್ದಾನೆ.

“ ಗಾಂಧಿನೇ ಅವನು ಸತ್ತ ಮೇಲೂ ಕೂಡ ಅವನು ಕುತಂತ್ರದಿಂದ ಗಳಿಸಿದ ರಾಷ್ಟ್ರಪಿತ ಪಟ್ಟ ಶಾಶ್ವತವಾಗಿ ಉಳಿಯಲಿ ಎಂಬ ಮೂರ್ಖತನದಿಂದ ಅವನೇ ಯಾಕೇ ತನ್ನ ಪಠಾಲಯಂಗಳಿಂದ ಗುಂಡುಹಾರಿಸಕೊಂಡಿರಬಾರದು...?” ಎಂದು ಮತ್ತೋರ್ವ ಕಮೆಂಟ್ ಮಾಡಿದ್ದಾನೆ.

“ಭಾರತ ಮಾತೆಯ ನಿಜವಾದ ಮಕ್ಕಳು ಹುತಾತ್ಮರಾದರು. ಗಾಂಧಿ ಅಂತ ಅಯೋಗ್ಯರು ಮಹಾತ್ಮರಾದರು. ಜೈ ಘೋಡ್ಸೇ ಜೀ” ಎನ್ನುವುದು ಮತ್ತೊಬ್ಬನ ಕಮೆಂಟ್.

ಈ ಪೋಸ್ಟ್ ಗೆ ಬಂದಿರುವ ಕಮೆಂಟ್ ಗಳು ಗೋಡ್ಸೆಯ ಕೃತ್ಯವನ್ನು ಸಮರ್ಥಿಸಿ ಹಾಗು ರಾಷ್ಟ್ರಪಿತ ಗಾಂಧೀಜಿಯವರನ್ನು ಅವಮಾನಿಸುವ ರೀತಿಯಲ್ಲಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹಂತಕ ನಾಥೂರಾಮ್ ಗೋಡ್ಸೆಯ ಜಯಂತಿ ಆಚರಿಸಲು ಅಭಿಪ್ರಾಯ ಸಂಗ್ರಹಿಸುವ ಹಾಗು ಅದನ್ನು ಬೆಂಬಲಿಸುವ ಇಂತಹ ದುಷ್ಕರ್ಮಿಗಳ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News