ನ.3ರಿಂದ 24 ಗಂಟೆ ಖಾಸಗಿ ವೈದ್ಯಕೀಯ ಸೇವೆ ಸ್ಥಗಿತ: ಐಎಂಎ

Update: 2017-11-01 14:25 GMT

ಮಂಗಳೂರು, ನ.1: ರಾಜ್ಯ ಸರಕಾರ ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಷ್ಟಾಬ್ಲಿಷ್‌ಮೆಂಟ್(ಕೆಪಿಎಂಇ) ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದನ್ನು ವಿರೋಧಿಸಿ ನ.3ರಂದು ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ಈ ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವೈದ್ಯಕೀಯ ಸೇವೆ ಸ್ಥಗಿತಗೊಳ್ಳಲಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಘವೇಂದ್ರ ಭಟ್ ಹೇಳಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.3ರಂದು ವೈದ್ಯಕೀಯ ಸೇವೆ ಸ್ಥಗಿತಗೊಳಿಸಲು ಐಎಂಎ ನಿರ್ಧರಿಸಿದ್ದು, ಅಂದು ಬೆಳಗ್ಗೆ 6 ಗಂಟೆಯಿಂದ ನ.4ರ ಬೆಳಗ್ಗೆ 6 ಗಂಟೆಯವರೆಗೆ ಖಾಸಗಿ ಆಸ್ಪತ್ರೆಗಳು ಸೇವೆ ಸ್ಥಗಿತಗೊಳಿಸಲಿವೆ. ಮೆಡಿಕಲ್ ಶಾಪ್‌ಗಳು ಕೂಡ ಬಂದ್‌ನಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿವೆ ಎಂದರು.

ಕೆಪಿಎಂಇ ಕಾಯ್ದೆ ಅನುಷ್ಠಾನವಾದರೆ ವೈದ್ಯರ ವೃತ್ತಿಗೆ ಕಂಟಕ ಎದುರಾಗಲಿದೆ. ಗ್ರಾಹಕರಿಗೆ ನ್ಯಾಯ ಒದಗಿಸಲು ಈಗಾಗಲೇ ಗ್ರಾಹಕರ ನ್ಯಾಯಾಲಯ ಮತ್ತು ಮೆಡಿಕಲ್ ಕೌನ್ಸಿಲ್‌ಗಳು ಇವೆ. ಆದರೆ ಸರಕಾರ ಜಿಲ್ಲಾ ಮಟ್ಟದಲ್ಲಿಯೂ ಕುಂದು ಕೊರತೆ ಪರಿಹಾರ ಸಮಿತಿಯನ್ನು ತರಲು ಹೊರಟಿದೆ. ಇಂತಹ ಸಮಿತಿಗಳು ಬಂದಲ್ಲಿ ದೂರುಗಳು ಹೆಚ್ಚಾಗಿ ವೈದ್ಯರು ಚಿಕಿತ್ಸೆ ನೀಡುವುದನ್ನು ಬಿಟ್ಟು ಗ್ರಾಹಕರ ನ್ಯಾಯಾಲಯ ಮತ್ತು ಮೆಡಿಕಲ್ ಕೌನ್ಸಿಲ್‌ಗಳ ಜೊತೆಗೆ ಇನ್ನೊಂದು ಸಮಿತಿಗೂ ಅಲೆದಾಡಬೇಕಾದ ಸ್ಥಿತಿ ಎದುರಾಗಲಿದೆ. ಚಿಕಿತ್ಸೆ ವೈಲ್ಯದಿಂದಾಗಲೀ ಅಥವಾ ಆಸ್ಪತ್ರೆಯ ವೆಚ್ಚಗಳ ಏರುಪೇರಿನ ಕಾರಣಕ್ಕೆ ತಪ್ಪುಗಳು ಆದಲ್ಲಿ ವೈದ್ಯರು ಜೈಲುವಾಸ ಅನುಭವಿಸಬೇಕಾದ ಸ್ಥಿತಿ ಎದುರಾಗಲಿದೆ. ನೂತನ ಕೆಪಿಎಂಇ ಕಾಯ್ದೆಯಲ್ಲಿ ವೈದ್ಯರಿಗೆ ಹಲವಾರು ಕಟ್ಟುಪಾಡುಗಳನ್ನು ವಿಧಿಸಲಾಗಿದ್ದು, ಇದರಿಂದ ವೈದ್ಯರು ವೈದ್ಯ ವೃತ್ತಿ ಮಾಡಲು ಅಸಾಧ್ಯವಾದ ಸ್ಥಿತಿ ಇದೆ. ಆದ್ದರಿಂದ ರಾಜ್ಯ ಸರಕಾರ ತಕ್ಷಣ ಈ ಮಸೂದೆಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದ ರಾಘವೇಂದ್ರ ಭಟ್ ಆಗ್ರಹಿಸಿದರು.

ನ.2ರಂದು ಐಎಂಎ ರಾಜ್ಯ ಘಟಕದ ಪದಾಧಿಕಾರಿಗಳು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಿದ್ದು, ಮುಖ್ಯಮಂತ್ರಿ ಮಸೂದೆ ಮಂಡನೆ ಮಾಡುವುದಿಲ್ಲ ಎಂದು ಅಧಿಕೃತವಾಗಿ ಹೇಳಬೇಕು. ಇಲ್ಲವಾದಲ್ಲಿ ವೈದ್ಯಕೀಯ ಸೇವೆ ಸ್ಥಗಿತ ಖಂಡಿತ. ರಾಜ್ಯ ಘಟಕದ ಪದಾಧಿಕಾರಿಗಳು ತೆಗೆದುಕೊಳ್ಳುವ ನಿರ್ಣಯದಂತೆ ಪ್ರತಿಭಟನೆ ನಡೆಯಲಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಐಎಂಎ ಪದಾಧಿಕಾರಿಗಳಾದ ಡಾ.ದಿವಾಕರ ರಾವ್, ಡಾ.ಯೋಗೀಶ್ ಬಂಗೇರ, ಡಾ.ದೇವದಾಸ ರೈ, ಡಾ.ಜಿ.ಕೆ.ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News