"ದೇಶಭಕ್ತಿ ಬೆಳೆಸಲು ವಿದ್ಯಾರ್ಥಿಗಳನ್ನು ಆರೆಸ್ಸೆಸ್ ಬೆಂಬಲಿತ ಸಂಸ್ಥೆಗೆ ಕರೆದುಕೊಂಡು ಹೋಗಿ"
ಜೈಪುರ್, ನ.1: ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸದಂಗವಾಗಿ ಆರೆಸ್ಸೆಸ್ ಬೆಂಬಲಿತ ಉದಯಪುರದ ಗೌರವ್ ಪ್ರತಾಪ್ ಕೇಂದ್ರಕ್ಕೆ ಕರೆದುಕೊಂಡು ಹೋಗಬೇಕೆಂದು ರಾಜಸ್ಥಾನ ಸರಕಾರ ರಾಜ್ಯದ ಎಲ್ಲಾ ಸರಕಾರಿ ಕಾಲೇಜುಗಳಿಗೆ ಆದೇಶಿಸಿದೆ ಎಂದು ವರದಿಯಾಗಿದೆ.
ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಶೌರ್ಯ, ಸಂಸ್ಕೃತಿ, ಉತ್ತಮ ಮೌಲ್ಯಗಳು ಮತ್ತು ಶಿಸ್ತನ್ನು ಬೆಳೆಸುವುದರ ಜತೆಗೆ ಪ್ರವಾಸೋದ್ಯಮ ಹಾಗೂ ಇತಿಹಾಸದ ಬಗ್ಗೆ ಅವರ ಜ್ಞಾನವನ್ನು ಹೆಚ್ಚಿಸುವುದೇ ಈ ಆದೇಶದ ಹಿಂದಿನ ಉದ್ದೇಶ ಎಂದು ಬಣ್ಣಿಸಲಾಗಿದೆ. ಈ ಬಗೆಗಿನ ಸುತ್ತೋಲೆಯನ್ನು ರಾಜ್ಯದ ಕಾಲೇಜು ಶಿಕ್ಷಣ ಇಲಾಖೆ ಅಕ್ಟೋಬರ್ 23ರಂದು ಹೊರಡಿಸಿದೆ. ಆರೆಸ್ಸೆಸ್ ಪ್ರಚಾರಕ ಸೋಹನ್ ಸಿಂಗ್ ಸ್ಥಾಪಿಸಿರುವ ಈ ಗೌರವ್ ಪ್ರತಾಪ್ ವಿದ್ಯಾ ಕೇಂದ್ರವನ್ನು ರಾಜ್ಯದ ಶಿಕ್ಷಣ ಇಲಾಖೆ "ರಾಷ್ಟ್ರೀಯ ತೀರ್ಥಕ್ಷೇತ್ರ ಮತ್ತು ಪ್ರವಾಸೋದ್ಯಮ ಕೇಂದ್ರ'' ಎಂದು ಬಣ್ಣಿಸಿದೆ.
ಮಹಾರಾಣಾ ಪ್ರತಾಪ್ ಯುವಜನರ ಆದರ್ಶ ಎಂದು ಬಿಂಬಿಸುವ ಯತ್ನವಾಗಿ ಈ ಕೇಂದ್ರವನ್ನು 100 ಕೋಟಿ ರೂ. ವೆಚ್ಚದಲ್ಲಿ ವೀರ್ ಶಿರೋಮಣಿ ಮಹಾರಾಣಾ ಪ್ರತಾಪ್ ಸಮಿತಿ ನಿರ್ಮಿಸಿತ್ತು. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ 2008ರಲ್ಲಿ ಇದರ ಶಂಕುಸ್ಥಾಪನೆ ನೆರವೇರಿಸಿದ್ದರೆ ಅದರ ಉದ್ಘಾಟನೆ ನವೆಂಬರ್ 2016ರಲ್ಲಿ ನಡೆದಿತ್ತು. ಪ್ರಧಾನಿ ನರೇಂದ್ರ ಮೋದಿ ಈ ಕೇಂದ್ರಕ್ಕೆ ಈ ವರ್ಷದ ಆಗಸ್ಟ್ ತಿಂಗಳಲ್ಲಿ ಭೇಟಿ ನೀಡಿದ್ದರು. ಈ ಕೇಂದ್ರದಲ್ಲಿ ಮಹಾರಾಣಾ ಪ್ರತಾಪ್ ಕುಳಿತಿರುವ ಭಂಗಿಯಲ್ಲಿ 57 ಅಡಿ ಉದ್ದದ ಲೋಹನದ ಪ್ರತಿಮೆಯಿದೆ. ಇದರ ಹೊರತಾಗಿ ಭಾರತ್ ಮಾತಾ ಮಂದಿರ್, ಭಾರತದ ದರ್ಶನ್ ಗೌರವ್ ದಿಘಾ ಮತ್ತು 300ಕ್ಕೂ ಹೆಚ್ಚು ಕಲಾಕೃತಿಗಳಿರುವ ನಾಲ್ಕು ಚಿತ್ರಕಲಾ ಗ್ಯಾಲರಿಗಳಿವೆ.
ಕಾಲೇಜು ಶಿಕ್ಷಣ ಇಲಾಖೆಯ ಹೊಸ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಜಂಟಿ ನಿರ್ದೇಶಕಿ ವಂದನಾ ಚಕ್ರವರ್ತಿ, ಸರಕಾರದ ನಿರ್ದೇಶನದಂತೆ ಆದೇಶ ಹೊರಡಿಸಲಾಗಿದ್ದರೂ ಅದೇನೂ ಕಡ್ಡಾಯವಲ್ಲ. ಕಾಲೇಜುಗಳ ಬಳಿ ಅಗತ್ಯ ಹಣಕಾಸು ಇದ್ದರೆ ಈ ಪ್ರವಾಸ ಆಯೋಜಿಸಬಹುದು ಎಂದು ಅವರು ಹೇಳಿದ್ದಾರೆ.
ಕೆಲವೊಂದು ಹಿಂದೂ ಅರಸರನ್ನು ಹಾಗೂ ಹಿಂದೂ ಸಿದ್ಧಾಂತವನ್ನು ವೈಭವೀಕರಿಸುವ ಯತ್ನದ ಭಾಗವಾಗಿ ಇಂತಹ ಆದೇಶ ಹೊರಡಿಸಲಾಗುತ್ತದೆ ಎಂದು ಭಾರತ್ ಜ್ಞಾನ್ ವಿಜ್ಞಾನ್ ಸಮಿತಿಯ ಕೋಮಲ್ ಶ್ರೀವಾಸ್ತವ ಹೇಳುತ್ತಾರೆ.