ರಾಯಬರೇಲಿ ಎನ್‌ಟಿಪಿಸಿಯ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ: 16 ಸಾವು
ಲಕ್ನೋ, ನ. 1: ರಾಯಬರೇಲಿ ಜಿಲ್ಲೆಯ ಉಂಚಾಹಾರ್‌ನ ಎನ್‌ಟಿಪಿಸಿ ಸ್ಥಾವರದಲ್ಲಿ ಬುಧವಾರ ಬಾಯ್ಲರ್ ಸ್ಫೋಟದಿಂದಾಗಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
16 ಜನರು ಸಾವನ್ನಪ್ಪಿದ್ದಾರೆ ಹಾಗೂ 90ರಿಂದ 100 ಮಂದಿ ಗಾಯಗೊಂಡಿದ್ದಾರೆ. ಹಲವು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಎಡಿಜಿ (ಕಾನೂನು ಹಾಗೂ ಸುವ್ಯವಸ್ಥೆ) ಆನಂದ್ ಕುಮಾರ್ ಹೇಳಿದ್ದಾರೆ.
ಪ್ರಕರಣದ ತನಿಖೆಗೆ ಎನ್‌ಟಿಪಿಸಿ ಆದೇಶ ನೀಡಿದೆ.
500 ಮೆಗಾವ್ಯಾಟ್ ವಿದ್ಯುತ್ ಘಟಕದ 6ನೇ ಸಂಖ್ಯೆಯ ಘಟಕದಲ್ಲಿ ಹಿರಿಯ ಅಧಿಕಾರಿಗಳು, ಎಂಜಿನಿಯರ್‌ಗಳು ಸೇರಿದಂತೆ ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಬಾಯ್ಲರ್ ಪೈಪ್ ಸ್ಪೋಟಗೊಂಡಿತು. ಈ ಘಟಕವನ್ನು ಎನ್‌ಪಿಟಿಸಿ ಇತ್ತೀಚೆಗೆ ಸ್ಥಾಪಿಸಿತ್ತು ಹಾಗೂ ಇದುವರೆಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಲಕ್ನೋದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಗಾಯಗೊಂಡ ಹೆಚ್ಚಿನ ಕಾರ್ಮಿಕರಿಗೆ ಶೇ. 70ರಷ್ಟು ಸುಟ್ಟ ಗಾಯಗಳಾಗಿವೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಮೂವರು ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸೇರಿದಂತೆ ತನ್ನ ಕೆಲವು ಹಿರಿಯ ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಲಕ್ನೋದಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾರಿಷಸ್‌ನಲ್ಲಿ ನಡೆಯುತ್ತಿರುವ ಹೂಡಿಕೆ ಶೃಂಗದಲ್ಲಿ ಪಾಲ್ಗೊಂಡಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ಅವರು, ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಂಭೀರ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.
ಪ್ರಾಥಮಿಕ ಕಾರ್ಯದರ್ಶಿ (ಗೃಹ) ಅರವಿಂದ ಕುಮಾರ್ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ರಾಷ್ಟ್ರೀಯ ವಿಕೋಪ ಪರಿಹಾರ ಪಡೆ (ಎನ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಅರವಿಂದ ಕುಮಾರ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸಾಧ್ಯವಾದಷ್ಟು ಸಂಖ್ಯೆಯ ಆ್ಯಂಬುಲೆನ್ಸ್‌ಗಳನ್ನು ಕಳುಹಿಸುವಂತೆ ವೈದ್ಯಕೀಯ ವಿಭಾಗಕ್ಕೆ ನಿರ್ದೇಶಿಸಲಾಗಿದೆ. ಲಕ್ನೋ ಮೂಲದ ಕಿಂಗ್ ಜಾರ್ಜ್ ಮೆಡಿಕಲ್ ವಿ.ವಿ. ಮುನ್ನೆಚ್ಚರಿಕೆಯ ಎಲ್ಲ ಕ್ರಮಗಳನ್ನ ಕೈಗೊಂಡಿದೆ.