ಅಶೋಕಚಕ್ರ, ಕೀರ್ತಿಚಕ್ರ ಪುರಸ್ಕೃತರಿಗೂ ರೈಲ್ವೆಯಲ್ಲಿ ಉಚಿತ ಎಕ್ಸಿಕ್ಯೂಟಿವ್ ದರ್ಜೆ ಪ್ರಯಾಣದ ಭಾಗ್ಯ

Update: 2017-11-01 13:09 GMT

ಹೊಸದಿಲ್ಲಿ,ನ.1: ರೈಲುಗಳಲ್ಲಿ ಪರಮವೀರ ಚಕ್ರ ಮತ್ತು ಮಹಾವೀರ ಚಕ್ರ ಪುರಸ್ಕೃತರಿಗೆ ನೀಡುತ್ತಿರುವ ಆಜೀವ ಉಚಿತ ಎಕ್ಸಿಕ್ಯೂಟಿವ್ ದರ್ಜೆ ಪ್ರಯಾಣ ಸೌಲಭ್ಯ ವನ್ನು ಈಗ ಅಶೋಕಚಕ್ರ ಮತ್ತು ಕೀರ್ತಿಚಕ್ರ ಪುರಸ್ಕೃತರಿಗೂ ವಿಸ್ತರಿಸಲಾಗಿದೆ.

2014ರಲ್ಲಿ ರೂಪಿಸಲಾಗಿದ್ದ ನೀತಿಯಂತೆ ರೈಲ್ವೆ ಸಚಿವಾಲಯವು ಪರಮವೀರ ಚಕ್ರ ಮತ್ತು ಮಹಾವೀರ ಚಕ್ರ ಪುರಸ್ಕೃತರಿಗೆ ಮೊದಲ ಎಸಿ/ಎಕ್ಸಿಕ್ಯೂಟಿವ್ ದರ್ಜೆಯಲ್ಲಿ ಉಚಿತ ಪ್ರಯಾಣದ ಪಾಸ್‌ಗಳನ್ನು ಒದಗಿಸುತ್ತಿದೆ. ಆದರೆ ವೀರಚಕ್ರ, ಅಶೋಕಚಕ್ರ, ಕೀರ್ತಿಚಕ್ರ ಮತ್ತು ಶೌರ್ಯಚಕ್ರ ಪುರಸ್ಕೃತರಿಗೆ ಹಾಗೂ ಮರಣೋತ್ತರವಾಗಿ ಇಂತಹ ಪುರಸ್ಕಾರಕ್ಕೆ ಪಾತ್ರರಾದ ಯೋಧರ ವಿಧವೆಯರಿಗೆ ಕೋಲ್ಕತಾದ ಮೆಟ್ರೋ ರೈಲನ್ನು ಹೊರತುಪಡಿಸಿ ದೇಶಾದ್ಯಂತ ಯಾವುದೇ ರೈಲಿನಲ್ಲಿ ಓರ್ವ ಸಂಗಾತಿಯೊಡನೆ ಜೀವಮಾನ ಪರ್ಯಂತ ಮೊದಲ ಎಸಿ/ದ್ವಿತೀಯ ಎಸಿ ದರ್ಜೆಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿತ್ತು. ಇದೀಗ ಅಶೋಕಚಕ್ರ ಮತ್ತು ಕೀರ್ತಿಚಕ್ರ ಪುರಸ್ಕೃತರಿಗೆ ರಾಜಧಾನಿ,ಶತಾಬ್ದಿ ಮತ್ತು ಡುರಾಂಟೊ ಸೇರಿದಂತೆ ಎಲ್ಲ ರೈಲುಗಳ ಎಕ್ಸಿಕ್ಯೂಟಿವ್ ದರ್ಜೆಯಲ್ಲಿಯೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

 ರೈಲ್ವೆಯ ಎಕ್ಸಿಕ್ಯೂಟಿವ್ ದರ್ಜೆಯನ್ನು ವಿಮಾನದಲ್ಲಿಯ ಬಿಸಿನೆಸ್ ಕ್ಲಾಸ್‌ಗೆ ಹೋಲಿಸಬಹುದಾಗಿದ್ದು, ಈ ಸೌಲಭ್ಯ ಶತಾಬ್ದಿ, ತೇಜಸ್ ಮತ್ತು ಕೆಲವು ಡುರಾಂಟೊ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಮಾತ್ರ ಇದೆ. ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಎಕ್ಸಿಕ್ಯೂಟಿವ್ ದರ್ಜೆಯಲ್ಲಿ ಪ್ರಯಾಣಕ್ಕೆ ಸಾಮಾನ್ಯವಾಗಿ ಎಸಿ ಚೇರ್ ಕಾರ್‌ನ ದುಪ್ಪಟ್ಟು ಶುಲ್ಕವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News