ಬಾಂಗ್ಲಾದಿಂದ ರೊಹಿಂಗ್ಯಾ ವಾಪಸಾತಿ ವಿಳಂಬ: ಮ್ಯಾನ್ಮಾರ್ ಆರೋಪ
ಯಾಂಗನ್ (ಮ್ಯಾನ್ಮಾರ್), ನ. 1: ರೊಹಿಂಗ್ಯಾ ಮುಸ್ಲಿಮ್ ನಿರಾಶ್ರಿತರನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಲು ಬಾಂಗ್ಲಾದೇಶ ವಿಳಂಬಿಸುತ್ತಿದೆ ಎಂದು ಮ್ಯಾನ್ಮಾರ್ ಆರೋಪಿಸಿದೆ. ಬೃಹತ್ ಮೊತ್ತದ ಅಂತಾರಾಷ್ಟ್ರೀಯ ನೆರವು ಸಿಗುವವರೆಗೆ ಅದು ಪ್ರಕ್ರಿಯೆಯನ್ನು ತಡೆಹಿಡಿಯಬಹುದು ಎಂಬ ಭೀತಿ ತನಗಿದೆ ಎಂದು ಅದು ಹೇಳಿದೆ.
ಆಗಸ್ಟ್ 25ರ ಬಳಿಕ, ಜನಾಂಗೀಯ ಹಿಂಸಾಚಾರ ಮತ್ತು ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ ಸುಮಾರು 6 ಲಕ್ಷ ರೊಹಿಂಗ್ಯಾ ನಿರಾಶ್ರಿತರು ಮ್ಯಾನ್ಮಾರ್‌ನ ರಖೈನ್ ರಾಜ್ಯದಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.
ಮ್ಯಾನ್ಮಾರ್‌ಗೆ ರೊಹಿಂಗ್ಯಾ ನಿರಾಶ್ರಿತರ ವಾಪಸಾತಿಗೆ ಸಂಬಂಧಪಟ್ಟಂತೆ 1990ರ ದಶಕದ ಆದಿ ಭಾಗದಲ್ಲಿ ಏರ್ಪಟ್ಟ ಒಪ್ಪಂದದ ಆಧಾರದಲ್ಲಿ ಯಾವುದೇ ಸಮಯದಲ್ಲಿ ವಾಪಸಾತಿ ಪ್ರಕ್ರಿಯೆಯನ್ನು ಆರಂಭಿಸಲು ಮ್ಯಾನ್ಮಾರ್ ಸಿದ್ಧವಾಗಿದೆ ಎಂದು ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿಯ ವಕ್ತಾರ ಝಾವ್ ಹಟಯ್ ಹೇಳಿದರು.
ಈ ಶರತ್ತುಗಳಿಗೆ ಬಾಂಗ್ಲಾದೇಶ ಇನ್ನೂ ಒಪ್ಪಿಗೆ ನೀಡಿಲ್ಲ ಎಂದರು.