ವ್ಯಾಪಂ ಹಗರಣ ಶಿವರಾಜ್ ಚೌಹಾಣ್‌ಗೆ ಕ್ಲೀನ್ ಚಿಟ್ ಪ್ರಶ್ನಿಸಿದ ಡಾ. ಆನಂದ್ ರೈ
ಭೋಪಾಲ್, ನ. 1: ಬಹುಕೋಟಿ ವ್ಯಾಪಂ ಹಗರಣದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ಗೆ ಕ್ಲೀನ್‌ಚಿಟ್ ನೀಡಿರುವುದನ್ನು ಹಗರಣ ಬಯಲಿಗೆಳೆದ ಡಾ. ಆನಂದ್ ರೈ ಪ್ರಶ್ನಿಸಿದ್ದಾರೆ.
ಸಿಬಿಐ ಸಲ್ಲಿಸಿದ ವರದಿ ಆಧಾರದಲ್ಲಿ ಮಾತ್ರ ಈ ಕೆಲವರಿಗೆ ಕ್ಲೀನ್ ಚಿಟ್ ನೀಡಲು ಅಸಾಧ್ಯ. ಓರ್ವನನ್ನು ಅಪರಾಧಿಯೇ, ನಿರಪರಾಧಿಯೇ ಎಂದು ನಿರ್ಧರಿಸಬೇಕಿರುವುದು ನ್ಯಾಯಾಲಯ ಹೊರತು ಸಿಬಿಐ ಅಲ್ಲ ಎಂದು ಅವರು ಹೇಳಿದ್ದಾರೆ.
ಹಾರ್ಡ್ ಡಿಸ್ಕ್ ತಿರುಚಿರುವ ಕುರಿತು ಅಕ್ಟೋಬರ್ 31ರ ಒಳಗೆ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಎರಡು ತಿಂಗಳ ಹಿಂದೆ ಸಿಬಿಐಗೆ ನಿರ್ದೇಶಿಸಿತ್ತು. ವರದಿಯನ್ನು ಅಕ್ಟೋಬರ್ 31ರಂದೇ ಯಾಕೆ ಸಲ್ಲಿಸಬೇಕಿತ್ತು. ಅದಕ್ಕಿಂತ ಮುನ್ನ ಯಾಕೆ ಸಲ್ಲಿಸಿಲ್ಲ ಎಂದು ರೈ ಸಿಬಿಐಯನ್ನು ಪ್ರಶ್ನಿಸಿದ್ದಾರೆ.
ಬೋಪಾಲ್ ಸಿಬಿಐ ನ್ಯಾಯಾಲಯದ ಮುಂದೆ ಸಲ್ಲಿಸಲಾದ ಸಿಎಫ್‌ಎಸ್‌ಎಲ್ ವರದಿ ಪ್ರತಿಯನ್ನು ದೂರುದಾರರಲ್ಲಿ ಓರ್ವರಾದ ಸೈಬರ್ ವಿಧಿವಿಜ್ಞಾನ ತಜ್ಞ ಪ್ರಶಾಂತ್ ಪಾಂಡೆಗೆ ಯಾಕೆ ನೀಡಿಲ್ಲ ಎಂದು ಆನಂದ್ ರೈ ಪ್ರಶ್ನಿಸಿದ್ದಾರೆ.