ಎನ್‌ಟಿಪಿಸಿ ಸ್ಥಾವರದಲ್ಲಿ ಸ್ಫೋಟ ಪ್ರಕರಣ: ಉ.ಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿ

Update: 2017-11-02 14:59 GMT

ಲಕ್ನೊ, ನ.2: ಉತ್ತರಪ್ರದೇಶದ ರಾಯ್‌ಬರೇಲಿಯ ಎನ್‌ಟಿಪಿಸಿ ಸ್ಥಾವರದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವಹಕ್ಕುಗಳ ಸಮಿತಿ (ಎನ್‌ಎಚ್‌ಆರ್‌ಸಿ) ಉತ್ತರಪ್ರದೇಶ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬುಧವಾರ ರಾಯ್‌ಬರೇಲಿ ಜಿಲ್ಲೆಯ ಉಂಚಹಾರ್ ಎಂಬಲ್ಲಿಯ ಎನ್‌ಟಿಪಿಸಿ ಸ್ಥಾವರದಲ್ಲಿ ಸಂಭವಿಸಿದ ಸ್ಫೋಟದಲ್ಲಿ 25ಕ್ಕೂ ಹೆಚ್ಚು ಮಂದಿ ಮೃತರಾಗಿದ್ದು ಸುಮಾರು 100 ಮಂದಿ ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ 6 ಮಂದಿ ಶೇ.90ಕ್ಕೂ ಹೆಚ್ಚು ಸುಟ್ಟಗಾಯ ಹೊಂದಿದ್ದು ಗಾಯಾಳುಗಳನ್ನು ಲಕ್ನೊದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ದುರಂತದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಎನ್‌ಎಚ್‌ಆರ್‌ಸಿ, ಈ ಪ್ರಕರಣಕ್ಕೆ ನಿರ್ಲಕ್ಷತೆ ಹಾಗೂ ಪ್ರಮಾದ ಕಾರಣವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಉನ್ನತ ಮಟ್ಟದ ತನಿಖೆಯ ಅಗತ್ಯವಿದೆ ಮತ್ತು ಇಂತಹ ದುರಂತ ಮರುಕಳಿಸಬಾರದು ಎಂದು ಹೇಳಿಕೆಯಲ್ಲಿ ತಿಳಿಸಿದೆ. ನೋಟಿಸನ್ನು ಸರಕಾರದ ಕಾರ್ಯದರ್ಶಿಗೆ ಕಳುಹಿಸಲಾಗಿದ್ದು ಆರು ವಾರದೊಳಗೆ ಸರಕಾರದಿಂದ ವಿವರವಾದ ಮಾಹಿತಿ ಅಪೇಕ್ಷಿಸಲಾಗಿದೆ ಎಂದು ಎನ್‌ಎಚ್‌ಆರ್‌ಸಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News