×
Ad

ಆಧಾರ್ ಕಾಯ್ದೆಯನ್ನು ಪ್ರಶ್ನಿಸಿರುವ ಅರ್ಜಿಗಳಿಗೆ ಉತ್ತರಿಸಿ: ಕೇಂದ್ರಕ್ಕೆ ಸುಪ್ರೀಂ ನಿರ್ದೇಶ

Update: 2017-11-03 18:07 IST

ಹೊಸದಿಲ್ಲಿ,ನ.3: ಆಧಾರ್ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಮತ್ತು ಬ್ಯಾಂಕ್ ಖಾತೆಗಳು ಹಾಗೂ ಮೊಬೈಲ್ ಸಂಖ್ಯೆಗಳೊಂದಿಗೆ ಆಧಾರ್ ಸಂಖ್ಯೆಯ ಜೋಡಣೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ನಾಲ್ಕು ಅರ್ಜಿಗಳಿಗೆ ಉತ್ತರಿಸುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಕೇಂದ್ರ ಸರಕಾರಕ್ಕೆ ಸೂಚಿಸಿದೆ.

ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಮಧ್ಯಂತರ ಆದೇಶವನ್ನು ಹೊರಡಿಸಲು ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯವು, ಆಧಾರ್ ಸಂಬಂಧಿತ ಎಲ್ಲ ವಿವಾದಗಳ ಅಂತಿಮ ವಿಚಾರಣೆಯು ಈ ತಿಂಗಳ ಕೊನೆಯ ವಾರದಲ್ಲಿ ಪ್ರತ್ಯೇಕ ಪೀಠದ ಮುಂದೆ ಆರಂಭಗೊಳ್ಳಲಿದೆ ಮತ್ತು ಸರಕಾರವು ಆಧಾರ್ ಜೋಡಣೆಗೆ ಗಡುವನ್ನು ಡಿ.31ರವರೆಗೆ ವಿಸ್ತರಿಸಿದೆ ಎಂದು ಹೇಳಿತು.

ಆದರೆ ಬ್ಯಾಂಕುಗಳು ಮತ್ತು ಮೊಬೈಲ್ ಫೋನ್ ಕಂಪನಿಗಳು ತಾವು ಗ್ರಾಹಕರಿಗೆ ರವಾನಿಸುವ ಎಸ್‌ಎಂಎಸ್‌ಗಳಲ್ಲಿ ಬ್ಯಾಂಕ್ ಖಾತೆಗಳು ಮತ್ತು ಮೊಬೈಲ್ ಫೋನ್ ಸಂಖ್ಯೆಗಳೊಂದಿಗೆ ಆಧಾರ್ ಜೋಡಣೆಗೆ ಅಂತಿಮ ದಿನಾಂಕಗಳನ್ನು ಸೂಚಿಸಬೇಕು ಎಂದು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ ಭೂಷಣ್ ಅವರನ್ನೊಳ ಗೊಂಡ ಪೀಠವು ನಿರ್ದೇಶ ನೀಡಿತು. ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಜೋಡಣೆಗೆ 2017,ಡಿ.31 ಮತ್ತು ಮೊಬೈಲ್ ಸಂಖ್ಯೆಗಳೊಂದಿಗೆ ಆಧಾರ್ ಜೋಡಣೆಗೆ 2018,ಫೆ.6 ಕೊನೆಯ ದಿನಾಂಕಗಳಾಗಿವೆ.

ಕೇಂದ್ರವು ಇತ್ತೀಚಿಗೆ ಸಲ್ಲಿಸಿರುವ ಪ್ರಮಾಣತ್ರವನ್ನು ಪ್ರಸ್ತಾಪಿಸಿದ ಅರ್ಜಿದಾರರ ಲ್ಲೋರ್ವರ ಪರ ವಕೀಲರಾದ ಶ್ಯಾಮ್ ದಿವಾನ ಅವರು, ಆಧಾರ್ ಜೋಡಣೆಗೆ ಅಂತಿಮ ದಿನಾಂಕವನ್ನು 2018,ಮಾ.31ರವರೆಗೆ ವಿಸ್ತರಿಸಬಹುದೆಂದು ಅದು ಹೇಳಿದೆ ಎಂದು ತಿಳಿಸಿದರು.

ಆದರೆ, ಅರ್ಜಿದಾರರು ಈ ವಿಷಯವನ್ನು ಆಧಾರ್ ಸಂಬಂಧಿತ ವಿಷಯಗಳ ವಿಚಾರಣೆ ನಡೆಸುವ ಪೀಠದ ಮುಂದೆ ಪ್ರಸ್ತಾಪಿಸಬಹುದಾಗಿದೆ ಎಂದು ನ್ಯಾಯಾಲಯವು ಹೇಳಿತು.

ಆಧಾರ್ ಸಂಬಂಧಿತ ಅರ್ಜಿಗಳ ವಿಚಾರಣೆಗಾಗಿ ಸಂವಿಧಾನ ಪೀಠವೊಂದನ್ನು ರಚಿಸಲಾಗುವುದು ಮತ್ತು ಅದು ನವಂಬರ್ ಕೊನೆಯ ವಾರದಲ್ಲಿ ವಿಚಾರಣೆಯನ್ನು ಆರಂಭಿಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ ನೇತೃತ್ವದ ಪೀಠವು ಅ.30ರಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News