ನಿಷೇಧಿತ ನೋಟುಗಳ ಠೇವಣಿಗೆ ಅನುಮತಿ ಕೋರಿದ್ದ ಅರ್ಜಿಗಳ ವಿಲೇವಾರಿ ಮಾಡಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ,ನ.3: ನಿಷೇಧಿತ ನೋಟುಗಳನ್ನು ಠೇವಣಿ ಮಾಡಲು ಅನುಮತಿ ಕೋರಿ ಸಲ್ಲಿಸಲಾಗಿದ್ದ 14 ಅರ್ಜಿಗಳನ್ನು ಶುಕ್ರವಾರ ವಿಲೇವಾರಿಗೊಳಿಸಿದ ಸರ್ವೋಚ್ಚ ನ್ಯಾಯಾಲಯವು, ಐವರು ನ್ಯಾಯಾಧೀಶರ ಸಂವಿಧಾನ ಪೀಠವು ನೋಟು ನಿಷೇಧದ ಕೇಂದ್ರದ ಕ್ರಮದ ಸಿಂಧುತ್ವವನ್ನು ನಿರ್ಧರಿಸುವ ಜೊತೆಗೆ ಈ ವಿಷಯವನ್ನೂ ಕೈಗೆತ್ತಿ ಕೊಳ್ಳಲಿದೆ ಎಂದು ಹೇಳಿತು.
ಆರ್‌ಬಿಐ ನಿಗದಿಪಡಿಸಿದ್ದ ಅವಧಿಯೊಳಗೆ ತಮ್ಮ ನೋಟುಗಳನ್ನು ಠೇವಣಿ ಮಾಡಲು ಸಾಧ್ಯವಾಗದಿದ್ದವರ ವ್ಯಕ್ತಿಗತ ಅರ್ಜಿಯ ವಿಚಾರಣೆಯನ್ನೂ ಸಂವಿಧಾನ ಪೀಠವು ನಡೆಸಲಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ ಅವರನ್ನೊಳಗೊಂಡ ಪೀಠವು ತಿಳಿಸಿತು.
ಆರ್‌ಬಿಐ ಕಾಯ್ದೆಯ ಕೆಲವು ನಿಯಮಗಳು ಮತ್ತು ಕೇಂದ್ರದ 2016,ನ.8ರ ಅಧಿಸೂಚನೆಯನ್ನು ತಾವು ಪ್ರಶ್ನಿಸಿಲ್ಲ, ಬದಲಿಗೆ ತಮ್ಮ ಬಳಿಯಿರುವ ನಿಷೇಧಿತ ನೋಟುಗಳನ್ನು ಠೇವಣಿ ಮಾಡಲು ಬಯಸಿದ್ದೇವೆ ಎಂದು ಕೆಲವು ಅರ್ಜಿದಾರರು ಹೇಳಿದರು.
ಸೂಕ್ತ ಕಾನೂನು ಪ್ರಕ್ರಿಯೆ ಇಲ್ಲದೆ ಮತ್ತು ವಿವರಣೆಗೆ ನ್ಯಾಯಯುತ ಅವಕಾಶ ನೀಡದೆ ತನ್ನ ಕಕ್ಷಿದಾರರು ಕಷ್ಟಪಟ್ಟು ಗಳಿಸಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಅರ್ಜಿದಾರಲ್ಲೋರ್ವರ ಪರ ವಕೀಲ ಪ್ರಣವ ಸಚದೇವ ಅವರು, ಸಂವಿಧಾನ ಪೀಠವನ್ನು ಸಾಧ್ಯವಾದಷ್ಟು ಶೀಘ್ರ ರಚಿಸುವಂತೆ ಕೋರಿದರು.
ತಮ್ಮ ಬಾಕಿಯುಳಿದಿರುವ ಅರ್ಜಿಗಳಿಗೆ 2-3 ಪುಟಗಳಷ್ಟು ಉದ್ದದ ವಾದಕಾಲೀನ ಅರ್ಜಿಗಳನ್ನು ಸೇರಿಸುವಂತೆ ಅರ್ಜಿದಾರರಿಗೆ ತಿಳಿಸಿದ ಪೀಠವು, ನಂತರ ಸಂವಿಧಾನ ಪೀಠವು ಇವುಗಳ ವಿಚಾರಣೆ ನಡೆಸುತ್ತದೆ ಎಂದು ತಿಳಿಸಿದರು.
ಅನಿವಾರ್ಯ ಕಾರಣಗಳಿಂದ ತಮಗೆ ನಿಷೇಧಿತ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಲು ಸಾಧ್ಯವಾಗಿರಲಿಲ್ಲ, ಹೀಗಾಗಿ ಈಗ ಠೇವಣಿ ಮಾಡಲು ಅನುಮತಿ ನೀಡುವಂತೆ ಕೋರಿ 14 ಜನರು ಸಲ್ಲಿಸಿದ್ದ ಅರ್ಜಿಗಳನ್ನು ಬಳಿಕ ನ್ಯಾಯಾಲಯವು ವಿಲೇವಾರಿಗೊಳಿಸಿತು.
1,000 ಮತ್ತು 500 ರೂ.ನೋಟುಗಳನ್ನು ಅಮಾನ್ಯಗೊಳಿಸುವ ಕೇಂದ್ರದ ನಿರ್ಧಾರದ ಸಿಂಧುತ್ವ ವಿಷಯವನ್ನು ಸರ್ವೋಚ್ಚ ನ್ಯಾಯಾಲಯವು 2016,ಡಿ.16ರಂದು ಸಂವಿಧಾನ ಪೀಠಕ್ಕೆ ಒಪ್ಪಿಸಿತ್ತು.