ಮಸೂದ್‌ನನ್ನು ಉಗ್ರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ತಡೆ: ಚೀನಾ ಸ್ಪಷ್ಟ ಸೂಚನೆ

Update: 2017-11-03 14:44 GMT

ಬೀಜಿಂಗ್, ನ. 3: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂಬುದಾಗಿ ಘೋಷಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯರ ನಡುವೆ ಒಮ್ಮತವಿಲ್ಲ ಎಂದು ಚೀನಾ ಗುರುವಾರ ಹೇಳಿದೆ.

ಇದರೊಂದಿಗೆ, ಅಝರ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಅಮೆರಿಕ ವಿಶ್ವಸಂಸ್ಥೆಯಲ್ಲಿ ಮಂಡಿಸಲಿರುವ ನಿರ್ಣಯಕ್ಕೆ ತಾನು ತಡೆ ಹೇರುವುದು ಖಚಿತ ಎಂಬ ಸೂಚನೆಯನ್ನು ನೀಡಿದೆ.

‘‘ಈ ವಿಷಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಇನ್ನೂ ಯಾವುದೇ ಒಮ್ಮತಕ್ಕೆ ಬಂದಿಲ್ಲ’’ ಎಂದು ಚೀನಾ ವಿದೇಶ ವ್ಯವಹಾರಗಳ ಸಚಿವಾಲಯ ಹೇಳಿದೆ.

ಭದ್ರತಾ ಮಂಡಳಿಯಲ್ಲಿ ವೀಟೊ ಅಧಿಕಾರ ಹೊಂದಿರುವ ಖಾಯಂ ಸದಸ್ಯ ದೇಶವಾಗಿರುವ ಚೀನಾ, ಕಳೆದ ಒಂದು ವರ್ಷದ ಅವಧಿಯಲ್ಲಿ ಅಝರ್‌ನನ್ನು ಭಯೋತ್ಪಾದಕ ಪಟ್ಟಿಗೆ ಸೇರಿಸುವ ಅಮೆರಿಕ ಮತ್ತು ಭಾರತಗಳ ಜಂಟಿ ಪ್ರಯತ್ನವನ್ನು ನಿರಂತರವಾಗಿ ತಡೆಯುತ್ತಾ ಬಂದಿದೆ.

ಮಹತ್ವದ ನೆರೆಯ ದೇಶ ಸಂಬಂಧ ಸುಧಾರಣೆಗೆ ಸರ್ವ ಪ್ರಯತ್ನ: ಚೀನಾ

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್‌ನ ಮುಖ್ಯಸ್ಥ ಮಸೂದ್ ಅಝರ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂಬುದಾಗಿ ಘೋಷಿಸುವ ವಿಶ್ವಸಂಸ್ಥೆಯ ನಿರ್ಣಯಕ್ಕೆ ಮತ್ತೊಮ್ಮೆ ತಡೆ ಹೇರಿದ ಒಂದು ದಿನದ ಬಳಿಕ, ‘ಮಹತ್ವದ ನೆರೆ ದೇಶ’ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸಲು ತಾನು ಸಿದ್ಧ ಎಂದು ಚೀನಾ ಶುಕ್ರವಾರ ಹೇಳಿಕೊಂಡಿತು.

‘‘ಭಾರತವು ಚೀನಾದ ಪ್ರಮುಖ ನೆರೆ ದೇಶವಾಗಿದೆ. ಭಾರತದೊಂದಿಗಿನ ಸಂಬಂಧಕ್ಕೆ ಚೀನಾ ಹೆಚ್ಚಿನ ಮಹತ್ವ ಕೊಡುತ್ತದೆ. ಹೊಸ ಶಕೆಗಾಗಿ ಭಾರತದೊಂದಿಗಿನ ಸಂಬಂಧದಲ್ಲಿ ನಿರಂತರ ಅಭಿವೃದ್ಧಿ ಕಾಣಲು ಚೀನಾ ಹಾತೊರೆಯುತ್ತದೆ’’ ಎಂದು ಸಹಾಯಕ ವಿದೇಶ ಸಚಿವ ಚೆನ್ ಕ್ಸಿಯಾಡಾಂಗ್ ಹೇಳಿದರು.

ಎಪಿಇಸಿ ಸಮ್ಮೇಳನದಲ್ಲಿ ಭಾಗವಹಿಸಲು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ವಿಯೆಟ್ನಾಮ್‌ಗೆ ನೀಡಲಿರುವ ಪ್ರವಾಸದ ಬಗ್ಗೆ ಮಾಹಿತಿ ನೀಡಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚೀನಾದ ನೆರೆಕರೆ ನೀತಿಯ ಬಗ್ಗೆ ವಿವರಿಸಿದರು. ಪ್ರಾಮಾಣಿಕತೆ, ಸೌಹಾರ್ದತೆ, ಸಾಮೂಹಿಕ ಪಾಲ್ಗೊಳ್ಳುವಿಕೆ ಮತ್ತು ಪರಸ್ಪರ ಲಾಭದ ತತ್ವಗಳ ಬಗ್ಗೆ ಗಮನ ನೀಡುವ ನೀತಿಯ ಬಗ್ಗೆ ಚೀನಾ ಯಾವತ್ತೂ ವಿಶ್ವಾಸ ಇರಿಸಿದೆ ಎಂದು ಹೇಳಿಕೊಂಡರು.

‘‘ನೆರೆಯ ದೇಶಗಳೊಂದಿಗೆ ಭಾಗೀದಾರಿಕೆಗಳನ್ನು ನಿರ್ಮಿಸುವ ನೀತಿಯನ್ನು ನಾವು ಕೆಲವು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿದ್ದೇವೆ. ಇದು ನಮ್ಮ ಪರಸ್ಪರ ರಾಜಕೀಯ ವಿಶ್ವಾಸವನ್ನು ಇನ್ನಷ್ಟು ದೃಢಗೊಳಿಸಿದೆ’’ ಎಂದು ಹೇಳಿದ ಅವರು, ಇದು ಬೀಜಿಂಗ್‌ನ ‘ಮಾರ್ಗದರ್ಶಿ ತತ್ವ’ವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News