ಕೆನೆತ್ ಇಯಾನ್ ಜಸ್ಟರ್ ಭಾರತಕ್ಕೆ ಅಮೆರಿಕದ ನೂತನ ರಾಯಭಾರಿ
ವಾಶಿಂಗ್ಟನ್, ನ. 3: ಭಾರತಕ್ಕೆ ನೂತನ ರಾಯಭಾರಿಯಾಗಿ ಕೆನೆತ್ ಇಯಾನ್ ಜಸ್ಟರ್‌ರನ್ನು ಅಮೆರಿಕ ಸೆನೆಟ್ ಗುರುವಾರ ಅವಿರೋಧವಾಗಿ ಆಯ್ಕೆ ಮಾಡಿದೆ.
ಹಿಂದಿನ ಅಧ್ಯಕ್ಷ ಬರಾಕ್ ಒಬಾಮರಿಂದ ನೇಮಕಗೊಂಡಿದ್ದ ಭಾರತೀಯ ರಾಯಭಾರಿ ರಿಚರ್ಡ್ ವರ್ಮ, ಸರಕಾರ ಬದಲಾಗುವಾಗ ಅನುಸರಿಸುವ ಪದ್ಧತಿಯಂತೆ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆ ಬಳಿಕ ಹಲವು ತಿಂಗಳುಗಳ ಕಾಲ ಹುದ್ದೆ ಖಾಲಿಯಾಗಿತ್ತು.
‘‘ವಲಯದ ನಮ್ಮ ಅತ್ಯಂತ ಮಹತ್ವದ ರಕ್ಷಣಾ ಭಾಗೀದಾರ ದೇಶಗಳ ಪೈಕಿ ಒಂದಾಗಿರುವ ಭಾರತದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಲು ಕೆನ್ ನೇಮಕವಾಗಿರುವುದಕ್ಕೆ ನನಗೆ ಹೆಮ್ಮೆಯಿದೆ’’ ಎಂದು ಡೆಮಾಕ್ರಟಿಕ್ ಪಕ್ಷದ ಸೆನೆಟರ್ ಮಾರ್ಕ್ ವಾರ್ನರ್ ಹೇಳಿದರು.
ರಿಪಬ್ಲಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಯ್ಕೆಯಾಗಿರುವ ಜಸ್ಟರ್, ಅಮೆರಿಕ ಸಂಸತ್ತಿನಲ್ಲಿ ಎಲ್ಲ ಪಕ್ಷಗಳ ಬೆಂಬಲವನ್ನು ಹೊಂದಿದ್ದಾರೆ. ಹಾಗಾಗಿ, ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸೆನೆಟ್‌ನಲ್ಲಿ ಮಾತನಾಡಿದ 62 ವರ್ಷದ ನೂತನ ಭಾರತ ರಾಯಭಾರಿ, ‘‘ಭಾರತ ಮತ್ತು ಅಮೆರಿಕಗಳು ಸಮಾನ ಮೌಲ್ಯಗಳನ್ನು ಹೊಂದಿವೆ ಹಾಗೂ ಪ್ರಜಾಪ್ರಭುತ್ವ, ಬಹುತ್ವ ಮತ್ತು ಕಾನೂನಿನ ಆಡಳಿತಕ್ಕೆ ಸಮಾನ ಬದ್ಧತೆಯನ್ನು ಹೊಂದಿವೆ’’ ಎಂದರು.