ಕೊರಿಯ ಪರ್ಯಾಯ ದ್ವೀಪದಲ್ಲಿ ಅಮೆರಿಕದ ಬಾಂಬರ್ ವಿಮಾನಗಳ ಹಾರಟ
ವಾಶಿಂಗ್ಟನ್, ನ. 3: ಜಪಾನ್ ಮತ್ತು ದಕ್ಷಿಣ ಕೊರಿಯಗಳೊಂದಿಗಿನ ಯುದ್ಧಾಭ್ಯಾಸದ ಭಾಗವಾಗಿ ಅಮೆರಿಕದ ಬಾಂಬರ್ ವಿಮಾನಗಳು ಗುರುವಾರ ಕೊರಿಯ ಪರ್ಯಾಯ ದ್ವೀಪದಲ್ಲಿ ಹಾರಾಡಿದವು ಎಂದು ಅಮೆರಿಕ ವಾಯು ಪಡೆ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ವಲಯಕ್ಕೆ ಭೇಟಿ ನೀಡಲಿರುವ ದಿನಗಳ ಮೊದಲು ಈ ಬೆಳವಣಿಗೆ ನಡೆದಿದೆ.
ಉತ್ತರ ಕೊರಿಯದ ಪ್ರಕ್ಷೇಪಕ ಕ್ಷಿಪಣಿ ಮತ್ತು ಪರಮಾಣು ಪರೀಕ್ಷೆಗಳ ಹಿನ್ನೆಲೆಯಲ್ಲಿ ಈ ವಲಯದಲ್ಲಿ ಪರಿಸ್ಥಿತಿ ಉದ್ವಿಗ್ನ ಸ್ಥಿತಿಗೆ ತಲುಪಿದೆ.
ಉತ್ತರ ಕೊರಿಯದ ಪರಮಾಣು ಮಹತ್ವಾಕಾಂಕ್ಷೆಯ ಹಿನ್ನೆಲೆಯಲ್ಲಿ, ಆ ದೇಶದ ನಾಯಕ ಕಿಮ್ ಜಾಂಗ್ ಉನ್ ಮತ್ತು ಟ್ರಂಪ್ ಈಗಾಗಲೇ ಹಲವು ಬಾರಿ ಪರಸ್ಪರ ವೈಯಕ್ತಿಕ ನಿಂದನೆಯ ಬೈಗುಳಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಹಾಗೂ ಪರಮಾಣು ಯುದ್ಧದ ಮಾತುಗಳನ್ನು ಆಡಿದ್ದಾರೆ. ಹಾಗಾಗಿ, ಈ ಪರ್ಯಾಯ ದ್ವೀಪಕ್ಕೆ ಟ್ರಂಪ್ ನೀಡುತ್ತಿರುವ ಈ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
ಈ ವಲಯದಲ್ಲಿ ಸೂಪರ್‌ಸಾನಿಕ್ ಬಿ-1ಬಿ ಲ್ಯಾನ್ಸರ್ ಬಾಂಬರ್ ವಿಮಾನಗಳ ಹಾರಾಟ ಉತ್ತರ ಕೊರಿಯದ ಅಸಹನೆಗೆ ಕಾರಣವಾಗುತ್ತಿದೆ. ಅಮೆರಿಕ ಯುದ್ಧ ವಿಮಾನಗಳನ್ನು ಪರ್ಯಾಯ ದ್ವೀಪಕ್ಕೆ ಕಳುಹಿಸಿರುವುದನ್ನು ಶುಕ್ರವಾರ ಖಂಡಿಸಿರುವ ಉತ್ತರ ಕೊರಿಯ, ಇದು ‘ಬ್ಲಾಕ್‌ಮೇಲ್’ ಎಂದು ಬಣ್ಣಿಸಿದೆ.
ಎರಡು ಬಿ-1ಬಿ ವಿಮಾನಗಳು ಗ್ವಾಮ್‌ನ ಆ್ಯಂಡರ್‌ಸನ್ ವಾಯು ನೆಲೆಯಿಂದ ಹಾರಾಟ ನಡೆಸಿದವು. ಬಳಿಕ ಅವುಗಳನ್ನು ಜಪಾನ್‌ನ ವಾಯು ಸ್ವರಕ್ಷಣಾ ವಿಮಾನಗಳು ಸೇರಿಕೊಂಡವು ಎಂದು ಯುಎಸ್ ಪೆಸಿಫಿಕ್ ಏರ್ ಫೋರ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದೆ.