×
Ad

ಆರೆಸ್ಸೆಸ್ ಶಾಖೆಯಾಗಿರುವ ಸಿಬಿಐ: ಕಾಂಗ್ರೆಸ್ ನಾಯಕ ಕಮಲನಾಥ ಆರೋಪ

Update: 2017-11-03 22:00 IST

ಇಂದೋರ,ನ.3: ವ್ಯಾಪಂ ಹಗರಣದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ‘ಕ್ಲೀನ್ ಚಿಟ್’ ನೀಡಿರುವುದಕ್ಕಾಗಿ ಶುಕ್ರವಾರ ಇಲ್ಲಿ ಸಿಬಿಐನ್ನು ಟೀಕಿಸಿದ ಹಿರಿಯ ಕಾಂಗ್ರೆಸ್ ನಾಯಕ ಕಮಲನಾಥ ಅವರು, ಅದೀಗ ಆರೆಸ್ಸೆಸ್‌ನ ಶಾಖೆಯಾಗಿ ಪರಿವರ್ತನೆಗೊಂಡಿದೆ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಯಾವುದಾದರೂ ನ್ಯಾಯಾಲಯವು ಚೌಹಾಣ್ ಅವರಿಗೆ ‘ಕ್ಲೀನ್ ಚಿಟ್’ ನೀಡಿದೆಯೇ? ಹಗರಣದ ತನಿಖೆಯನ್ನು ನಡೆಸುವಂತೆ ಸಿಬಿಐಗೆ ಸೂಚಿಸಲಾಗಿತ್ತು, ಆದರೆ ಅದು ತೀರ್ಪುಗಳನ್ನು ನೀಡಲು ಆರಂಭಿಸಿದೆ. ಚೌಹಾಣ್‌ಗೆ ‘ಕ್ಲೀನ್ ಚಿಟ್’ ನೀಡುವ ಮೂಲಕ ಸಿಬಿಐ ಆರೆಸ್ಸೆಸ್ ಶಾಖೆಯ ಮಟ್ಟಕ್ಕಿಳಿದಿದೆ ಎಂದರು.

ಅ.31ರಂದು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ತನ್ನ ಆರೋಪ ಪಟ್ಟಿಯಲ್ಲಿ ಸಿಬಿಐ, ವ್ಯಾಪಂ ಅಧಿಕಾರಿ ನಿತಿನ್ ಮೊಹಿಂದ್ರಾನಿಂದ ವಶಪಡಿಕೊಳ್ಳಲಾಗಿದ್ದ ಹಾರ್ಡ್ ಡಿಸ್ಕ್ ಡ್ರೈವ್‌ನ ವಿಧಿವಿಜ್ಞಾನ ವಿಶ್ಲೇಷಣೆಯು ಮುಖ್ಯಮಂತ್ರಿಗಳ ಪತ್ರಗಳ ಪ್ರಸ್ತಾಪವಿರುವ ಡಿಸ್ಕ್‌ಗಳಲ್ಲಿ ಹಸ್ತಕ್ಷೇಪ ನಡೆದಿದೆ ಎನ್ನುವುದನ್ನು ತೋರಿಸಿದೆ ಎಂದು ತಿಳಿಸಿದೆ.

ರಾಜ್ಯ ಸರಕಾರವು ಇಡೀ ದೇಶದಲ್ಲಿ ಅತ್ಯಂತ ಭ್ರಷ್ಟ ಸರಕಾರವಾಗಿದೆ ಎಂದು ಹೇಳಿದ ಕಮಲನಾಥ, ಕಳೆದ 14 ವರ್ಷಗಳ ಬಿಜೆಪಿ ಆಡಳಿತದಲ್ಲಿ 160 ಹಗರಣಗಳು ಬಯಲಿಗೆ ಬಂದಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News