ಆತ್ಮರಕ್ಷಣೆಗಾಗಿ ಹೆಣ್ಣು ಮಕ್ಕಳಿಗೆ ಶಾಲೆಗಳಲ್ಲಿ ಕರಾಟೆ ಕಲಿಕೆ ಅಗತ್ಯ: ಸಿದ್ದರಾಮಯ್ಯ

Update: 2017-11-04 10:23 GMT

ಮಂಗಳೂರು, ನ.4: ರಾಜ್ಯದ ಎಲ್ಲಾ ಶಾಲೆಗಳಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಗಾಗಿ ಕರಾಟೆ ಕಲಿಕೆಯ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ನೆಹರೂ ಮೈದಾನದಲ್ಲಿ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಡೋಜೋ(ರಿ)ಇದರ ವತಿಯಿಂದ ಆಯೋಜಿಸಲಾಗಿರುವ ಎರಡು ದಿನಗಳ ರಾಷ್ಟಮಟ್ಟದ ಮುಕ್ತ ಕರಾಟೆ ಪಂದ್ಯಾವಳಿ ‘ಇಂಡಿಯನ್ ಕರಾಟೆ ಚಾಂಪಿಯನ್‌ಶಿಪ್-2017’ನ್ನು ಇಂದು ಮಧ್ಯಾಹ್ನ ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕರಾಟೆಯಂತಹ ಸಮರ ಕಲೆ ಎಲ್ಲರಿಗೂ ಅಗತ್ಯವಿದೆ. ಪ್ರಸಕ್ತ ನಮ್ಮ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಲ್ಲಿ ಕರಾಟೆಯಂತಹ ಆತ್ಮರಕ್ಷಣೆಯ ಕಲೆಯನ್ನು ಅಗತ್ಯವಾಗಿ ಕಲಿಸಲು ಆಸಕ್ತಿ ವಹಿಸಬೇಕಾಗಿದೆ. ಇದು ಆತ್ಮ ರಕ್ಷಣೆಗಿಂತಲೂ ಹೆಣ್ಣು ಮಕ್ಕಳಲ್ಲಿ ಮಾನಸಿಕ ಧೈರ್ಯವನ್ನು ಮೂಡಿಸುತ್ತದೆ ಎಂದರು.

‘ಎಂಟರ್ ದಿ ಡ್ರಾಗನ್ ’ನೋಡಿದ್ದೇನೆ: ಕರಾಟೆಯ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಸಿನಿಮಾಗಳಲ್ಲಿ ಸ್ವಲ್ಪ ನೋಡಿ ಗೊತ್ತು. ಬ್ರೂಸ್ಲಿಯ ‘ಎಂಟರ್ ದಿ ಡ್ರಾಗನ್’ ಸಿನೆಮಾ ನೋಡಿದ್ದೆನೆ ಎಂದ ಸಿದ್ದರಾಮಯ್ಯ, ಮಂಗಳೂರು ಮೇಯರ್ ಕವಿತಾ ಸನಿಲ್ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದು ಸಾಧನೆ ಮಾಡಿದವರು. ಅವರು ಇಲ್ಲಿನ ಕಿರಿಯರಿಗೆ ಮಾದರಿಯಾಗಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕ ಬಿ.ಎ.ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮನಪಾ ಉಪ ಮೇಯರ್ ರಜನೀಶ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ , ಸೆಲ್ಫ್ ಡಿಫೆನ್ಸ್ ಇಂಡಿಯನ್ ಕರಾಟೆ ಸ್ಕೂಲ್‌ನ ಸ್ಥಾಪಕ ಗ್ರಾಂಡ್ ಮಾಸ್ಟರ್‌ಬಿ.ಎಂ. ನರಸಿಂಹನ್, ಸಂಘಟನೆಯ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಂದ್ರ, ಮೇಯರ್ ಹಾಗೂ ಪಂದ್ಯಾವಳಿಯ ಸಂಘಟಕಿ ಕವಿತಾ ಸನಿಲ್, ಸಂಸ್ಥೆಯ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

 ಬಳಿಕ ಮುಖ್ಯಮಂತ್ರಿಗಳು ಕರಾಟೆ ಪಿಚ್‍ನಲ್ಲಿ ಪುಟಾಣಿ ಕರಾಟೆ ಪಟುಗಳಿಬ್ಬರಿಗೆ ಧ್ವಜ ನಿಶಾನೆ ತೋರಿಸುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕರಾಟೆ ಪಿಚ್‍ನಲ್ಲಿ ಮೇಯರ್ ಕವಿತಾ ಸನಿಲ್ ಅವರೊಂದಿಗೆ ಕರಾಟೆ ಶೈಲಿ ಪ್ರದರ್ಶಿಸುವ ಮೂಲಕ ನೆರೆದಿದ್ದವರಲ್ಲಿ ಹರ್ಷ ಮೂಡಿಸಿದರು. ಪಂದ್ಯಾಟಕ್ಕೆ ಆಗಮಿಸಿದ ಮಕ್ಕಳಿಗೆ ಹಸ್ತಲಾಘವ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News