×
Ad

ಎನ್‌ಎಸ್‌ಎ ಧೋವಲ್ ಪುತ್ರನ ಪ್ರತಿಷ್ಠಾನ ಉದ್ಯಮಿಗಳ ಲಾಬಿಗೆ ವೇದಿಕೆಯಾಗುತ್ತಿದೆಯೇ?

Update: 2017-11-04 20:07 IST

ಹಣಕಾಸು ವಿವರಗಳನ್ನು ಬಹಿರಂಗಪಡಿಸದ ನಾಲ್ವರು ಕೇಂದ್ರ ಸಚಿವರಿರುವ ಪ್ರತಿಷ್ಠಾನ

ಹೊಸದಿಲ್ಲಿ, ನ.4: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರ ಪುತ್ರ ಶೌರ್ಯ ಧೋವಲ್ ನಡೆಸುತ್ತಿರುವ ‘ ಇಂಡಿಯಾ ಫೌಂಡೇಶನ್’ ಕೇಂದ್ರ ಸರಕಾರದ ಸಚಿವರು, ಅಧಿಕಾರಿಗಳು ಹಾಗೂ ಉದ್ಯಮ ದಿಗ್ಗಜರುಗಳು ಜೊತೆಗೂಡಿ ಸರಕಾರದ ನೀತಿಗಳ ಬಗ್ಗೆ ಚರ್ಚಿಸಲು ವೇದಿಕೆಯೆಂದು ಹೇಳಿಕೊಳ್ಳುತ್ತಿದೆ. ಆದರೆ ಈ ಪ್ರತಿಷ್ಠಾನವು ಹಿತಾಸಕ್ತಿಗಳ ಸಂಘರ್ಷ ಹಾಗೂ ಉದ್ಯಮಿಗಳ ಲಾಬಿಗೆ ಅವಕಾಶ ಮಾಡಿಕೊಡುತ್ತಿರುವ ವೇದಿಕೆಯೂ ಆಗುವ ಸಾಧ್ಯತೆಯಿದೆಯೆಂದು 'ದಿ ವೈರ್' ಅಂತರ್ಜಾಲ ತಾಣದ ವರದಿಯೊಂದು ಸಂದೇಹ ವ್ಯಕ್ತಪಡಿಸಿದೆ.

ತನ್ನ ಮಂಡಳಿಯಲ್ಲಿ ನಿರ್ದೇಶಕರಾಗಿ ಕೇಂದ್ರದ ನಾಲ್ವರು ಸಚಿವರಿರುವ ಹೊರತಾಗಿಯೂ ಇಂಡಿಯಾ ಪ್ರತಿಷ್ಠಾನವು ತನ್ನ ಬ್ಯಾಲೆನ್ಸ್‌ಶೀಟ್ ಅಥವಾ ಹಣಕಾಸು ವಿವರಗಳನ್ನು ಬಹಿರಂಗಪಡಿಸಿಲ್ಲ. ಈ ಬಗ್ಗೆ ದಿ ವೈರ್ ಕೇಳಿದ ಮಾಹಿತಿಗೆ ಈ ನಾಲ್ವರು ಸಚಿವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಫೌಂಡೇಶನ್‌ನ ವರಿಷ್ಠರಲ್ಲೊಬ್ಬರಾದ ರಾಮ್‌ಜಾಧವ್ ಅವರು ಈ ಬಗ್ಗೆ ‘ಸೂಕ್ತ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಲಿದ್ದಾರೆ’ ಎಂದು ಸಮಜಾಯಿಷಿ ನೀಡಿದ್ದಾರೆಂದು 'ದಿ ವೈರ್' ವರದಿಯಲ್ಲಿ ಹೇಳಿದೆ.

ಪ್ರತಿಷ್ಠಾನವು ಸಮ್ಮೇಳನಗಳು, ಜಾಹೀರಾತು ಹಾಗೂ ಪತ್ರಿಕೆಯಿಂದ ವರಮಾನವನ್ನು ಗಳಿಸುತ್ತಿದೆಯೆಂದು ಶೌರ್ಯ ಧೋವಲ್ 'ವೈರ್' ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಆದರೆ ಈ ವರಮಾನದ ಮೂಲಕ ಮತ್ತು ಟ್ರಸ್ಟ್ ಆಗಿ ನೋಂದಣಿಗೊಂಡಿರುವ ಈ ಪ್ರತಿಷ್ಠಾನವು ದಿಲ್ಲಿಯ ಲುತ್ಯೆನ್ಸ್‌ನ ಹೈಲಿ ರಸ್ತೆಯಲ್ಲಿರುವ ವಿಲಾಸಿ ಕಟ್ಟಡದಲ್ಲಿರುವ ತನ್ನ ಕಚೇರಿಯ ಬಾಡಿಗೆ ದರ ಹಾಗೂ ಸಿಬ್ಬಂದಿ ವೇತನ ಸೇರಿದಂತೆ ದೈನಂದಿನ ಕಾರ್ಯನಿರ್ವಹಣೆಗೆ ಹೇಗೆ ಹಣ ಹೊಂದಿಸಿಕೊಳ್ಳುತ್ತಿದೆಯೆಂಬ ಬಗ್ಗೆ ಅವರು ಯಾವುದೇ ಉತ್ತರವನ್ನು ನೀಡಿಲ್ಲ.

ಶೌರ್ಯಧೋವಲ್ ಹಾಗೂ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ವಾರಣಾಸಿ ನಡೆಸುತ್ತಿರುವ ಇಂಡಿಯಾ ಫೌಂಡೇಶನ್ ನಿರ್ದೇಶಕರ ಪಟ್ಟಿಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಹಾಗೂ ಕೈಗಾರಿಕೆ ಸಚಿವ ಸುರೇಶ್ ಪ್ರಭು ಹಾಗೂ ಕೇಂದ್ರದ ಇಬ್ಬರು ಸಹಾಯಕ ಸಚಿವರಾದ ಜಯವಂತ್ ಸಿನ್ಹಾ (ನಾಗರಿಕ ವಾಯುಯಾನ) ಹಾಗೂ ಎಂ.ಜೆ.ಅಕ್ಬರ್ ( ವಿದೇಶಾಂಗ) ಅವರ ಹೆಸರುಗಳೂ ಇರುವುದಾಗಿ ದಿ ವೈರ್ ತನ್ನ ವರದಿಯಲ್ಲಿ ತಿಳಿಸಿದೆ.

 ಈ ಪ್ರತಿಷ್ಠಾನವು ಆಯೋಜಿಸುವ ವಿಚಾರ ಸಂಕಿರಣದಲ್ಲಿ ಪ್ರಮುಖ ಸಚಿವರು ಪಾಲ್ಗೊಳ್ಳುತ್ತಾರೆ. ಈ ವಿಚಾರಸಂಕಿರಣಗಳಿಗೆ ಸರಕಾರಿ ಸಂಸ್ಥೆಗಳು, ಭಾರತದ ಹಾಗೂ ವಿದೇಶಗಳ ಖಾಸಗಿ ಕಂಪೆನಿಗಳು ಪ್ರಾಯೋಜಕತ್ವ ನೀಡುತ್ತಿವೆಯೆಂದು ಅದು ಹೇಳಿದೆ.

ಸರಕಾರದಿಂದ ಪ್ರಯೋಜನವನ್ನು ಪಡೆಯಲೆಂದೇ ನೀಡುವುದಕ್ಕೆ ಪ್ರತಿಯಾಗಿ ಈ ವಿದೇಶಿ ಹಾಗೂ ಭಾರತೀಯ ಕಂಪೆನಿಗಳು ಇಂಡಿಯಾ ಪ್ರತಿಷ್ಠಾನದ ‘ಕಾರ್ಯಕ್ರಮ’ಗಳಿಗೆ ಪ್ರಾಯೋಜಕರಾಗುತ್ತಿರುವ ಸಾಧ್ಯತೆಗಳಿವೆಯೆಂದು ದಿ ವೈರ್ ವರದಿ ಶಂಕೆ ವ್ಯಕ್ತಪಡಿಸಿದೆ.

ಇಂಡಿಯಾ ಫೌಂಡೇಶನ್ ಆಯೋಜಿಸಿದ ‘ಹಿಂದೂ ಮಹಾಸಾಗರ ಹಾಗೂ ಸ್ಮಾರ್ಟ್ ಬೋರ್ಡರ್ ಮ್ಯಾನೇಜ್‌ಮೆಂಟ್ ಸಮ್ಮೇಳನಗಳಿಗೆ ವಿಮಾನ ನಿರ್ಮಾಣ ಸಂಸ್ಥೆ ಬೋಯಿಂಗ್ ಹಾಗೂ ಇಸ್ರೇಲಿ ಸಂಸ್ಥೆ ಮಾಗಾಲ್ ಪ್ರಯೋಜಕತ್ವ ವಹಿಸಿದ್ದವು. ವಿದೇಶಿ ಬ್ಯಾಂಕ್ ಡಿಬಿಎಸ್ ಹಾಗೂ ಹಲವಾರು ಭಾರತೀಯ ಖಾಸಗಿ ಕಂಪೆನಿಗಳು ಕೂಡಾ ಈ ಪ್ರತಿಷ್ಠಾನದ ಪ್ರಾಯೋಜಕರ ಪಟ್ಟಿಯಲ್ಲಿರುವುದಾಗಿ ವರದಿ ಹೇಳಿದೆ.

ಮನಮೋಹನ್‌ಸಿಂಗ್ ಆಡಳಿತದಲ್ಲಿ ನಡೆದ 111 ವಿಮಾನಗಳ ಖರೀದಿ ಹಗರಣದಲ್ಲಿ ಭಾರತ ಸರಕಾರದ ಬೊಕ್ಕಸಕ್ಕೆ 70 ಸಾವಿರ ಕೋಟಿ ರೂ.ಗೂ ಅಧಿಕ ನಷ್ಟವನ್ನುಂಟು ಮಾಡಿದ ಆರೋಪವನ್ನು ಬೋಯಿಂಗ್ ಸಂಸ್ಥೆ ಎದುರಿಸುತ್ತಿದೆ. ವಾಯುಯಾನ ಸಚಿವ ಜಯಂತ್ ಸಿನ್ಹಾ ಈ ಪ್ರತಿಷ್ಠಾನದ ನಿರ್ದೇಶಕರಾಗಿರುವುದರಿಂದ, ತನಿಖೆಯನ್ನು ಎದುರಿಸುತ್ತಿರುವ ವಿಮಾನ ಕಂಪೆನಿಯು ಪ್ರತಿಷ್ಠಾನದ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ವಹಿಸಿರುವುದು ಹಿತಾಸಕ್ತಿಗಳ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆಯೆಂದು ವೈರ್ ಆರೋಪಿಸಿದೆ.

ಮೌನತಾಳಿದ ಪ್ರಧಾನಿ ಕಾರ್ಯಾಲಯ

ಇಂಡಿಯಾ ಫೌಂಡೇಶನ್‌ನಲ್ಲಿ ಕೇಂದ್ರ ಸರಕಾರದ ನಾಲ್ವರು ಸಚಿವರು ನಿರ್ದೇಶಕರಾಗಿ ಕಾರ್ಯಾಚರಿಸುತ್ತಿರುವುದು ಹಾಗೂ ಶೌರ್ಯ ಧೋವಲ್ ಅವರ ತಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವುದು ಹಿತಾಸಕ್ತಿಗಳ ಸಂಘರ್ಷಕ್ಕೆ ಕಾರಣವಾಗುತ್ತಿರುವ ಬಗ್ಗೆ ಪ್ರಧಾನಿ ಮೋದಿ ಗಮನಿಸಿದ್ದಾರೆಯೇ ಎಂದು ವೈರ್ ಕೇಳಿದ ಪ್ರಶ್ನೆಗೆ ಪ್ರಧಾನಿ ಕಾರ್ಯಾಲಯದ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಯಾವುದೇ ಉತ್ತರವನ್ನು ನೀಡಿಲ್ಲವೆಂದು ವೈರ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News