ಎಲ್ಲ ಹಾಡುಗಳನ್ನು ನಾನೇ ಹಾಡಿದರೆ ಜನರು ಸುಸ್ತಾಗುತ್ತಾರೆ: ಗಾಯಕ ಅರಿಜಿತ್
ಮುಂಬೈ,ನ.4: ಅರಿಜಿತ್ ಸಿಂಗ್ ಇಂದು ಬಾಲಿವುಡ್‌ನಲ್ಲಿ ಅತ್ಯಂತ ಬೇಡಿಕೆಯ ಗಾಯಕರಾಗಿದ್ದಾರೆ. ಪ್ರತಿಯೊಂದು ಹಿಟ್ ಗೀತೆಯೂ ಅವರ ಧ್ವನಿಯಲ್ಲಿಯೇ ಬರುತ್ತಿದೆ. ಆದರೆ ಅರಿಜಿತ್ ಈಗ ತನ್ನ ಹಾಡುವಿಕೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ‘‘ಅತಿಯಾಗಿ ಸೇವಿಸಿದರೆ ಅಮೃತವೂ ವಿಷವಾಗುತ್ತದೆ’’ ಎಂಬಂತೆ ಜನರು ತನ್ನದೇ ಹಾಡುಗಳನ್ನು ಕೇಳಿ ಕೇಳಿ ಕೊನೆಗೆ ಬೋರೆದ್ದು ಹೋದರೆ ಎಂಬ ಆತಂಕ ಅವರದು.
ಅರಿಜಿತ್ ಈ ವರ್ಷವೊಂದರಲ್ಲಿಯೇ ಝಾಲಿಮಾ,ಫಿರ್ ಬೀ ತುಮ್‌ಕೋ ಚಾಹೂಂಗಾ ಮತ್ತು ಹವಾಯೆಂ ಅಂತಹ ಹಿಟ್‌ಗೀತೆಗಳನ್ನು ನೀಡಿದ್ದಾರೆ.
ಈ ದಿನಗಳಲ್ಲಿ ನಾನು ರೇಡಿಯೋ ಆಲಿಸುವುದನ್ನೇ ನಿಲ್ಲಿಸಿದ್ದೇನೆ. ಏಕೆಂದರೆ ನಾನು ರೇಡಿಯೊ ಆನ್ ಮಾಡಿದಾಗೆಲ್ಲ ನನ್ನದೇ ಹಾಡುಗಳು ಬರುತ್ತಿರುತ್ತವೆ. ನೀವೇ ಹಾಡಿದ ಹಾಡುಗಳಾಗಿದ್ದರೂ ಸದಾ ಕಾಲ ಅವುಗಳನ್ನೇ ಕೇಳಲು ನಿಮಗೆ ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಎಷ್ಟೊಂದು ಸಂಗೀತ ಕೇಳಿಬರುತ್ತಿದೆ ಎಂದರೆ ಜನರು ಈಗಾಗಲೇ ಸುಸ್ತಾಗಿದ್ದಾರೆ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅರಿಜಿತ್ ಹೇಳಿದರು.
ಕಳೆದ ವರ್ಷದಿಂದ ನಾನು ಹಾಡುವಿಕೆಯನ್ನು ಕಡಿಮೆ ಮಾಡುತ್ತಿದ್ದೇನೆ. ಆದರೆ ಇದರಲ್ಲಿ ನಾನು ಎಷ್ಟು ಯಶಸ್ವಿಯಾಗುತ್ತೇನೋ ಗೊತ್ತಿಲ್ಲ. ಏಕೆಂದರೆ ನನ್ನ ಗಾಯನವನ್ನೇ ಬಯಸುವ ಜನರಿಗೆ ಇಲ್ಲವೆಂದು ಹೇಳುವುದೂ ಕಷ್ಟ ಎಂದು ಅರಿಜಿತ್ ಸಂಕಷ್ಟವನ್ನು ತೋಡಿಕೊಂಡರು.