×
Ad

ರಣಜಿ: ಕರ್ನಾಟಕ ತಂಡಕ್ಕೆ ‘ಹ್ಯಾಟ್ರಿಕ್’ ಜಯ

Update: 2017-11-04 23:44 IST

ಪುಣೆ, ನ.4: ಮಧ್ಯಮ ವೇಗದ ಬೌಲರ್ ಅಭಿನವ್ ಮಿಥುನ್ ಐದು ವಿಕೆಟ್ ಗೊಂಚಲು(5-66)ಸಹಾಯದಿಂದ ಕರ್ನಾಟಕ ತಂಡ ರಣಜಿ ಟ್ರೋಫಿಯ ‘ಎ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಮಹಾರಾಷ್ಟ್ರ ತಂಡವನ್ನು ಇನಿಂಗ್ಸ್ ಹಾಗೂ 136 ರನ್‌ಗಳ ಅಂತರದಿಂದ ಹೀನಾಯವಾಗಿ ಸೋಲಿಸಿದೆ.

ರಣಜಿಯ ನಾಲ್ಕನೆ ದಿನವಾದ ಶನಿವಾರ ಮಹಾರಾಷ್ಟ್ರವನ್ನು ಎರಡನೆ ಇನಿಂಗ್ಸ್‌ನಲ್ಲಿ 247 ರನ್‌ಗೆ ನಿಯಂತ್ರಿಸಿದ ಕರ್ನಾಟಕ ಟೂರ್ನಿಯಲ್ಲಿ ಸತತ 3ನೆ ಜಯ ದಾಖಲಿಸಿತು. ಒಟ್ಟು 20 ಅಂಕ ಸಂಪಾದಿಸಿ ‘ಎ’ ಗುಂಪಿನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿತು. ಮೊದಲ ಇನಿಂಗ್ಸ್‌ನಲ್ಲಿ 383 ರನ್ ಹಿನ್ನಡೆ ಕಂಡಿದ್ದ ಮಹಾರಾಷ್ಟ್ರ ತಂಡ ಶನಿವಾರ 4 ವಿಕೆಟ್‌ಗಳ ನಷ್ಟಕ್ಕೆ 135 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿತು. 61 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಋತುರಾಜ್ ಗಾಯಕ್ವಾಡ್ ನಿನ್ನೆಯ ಮೊತ್ತಕ್ಕೆ 4 ರನ್ ಸೇರಿಸಿ ಮಿಥುನ್‌ಗೆ ವಿಕೆಟ್ ಒಪ್ಪಿಸಿದರು. 55 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ಗಳಿರುವ ಮಿಂಚಿನ 51 ರನ್ ಗಳಿಸಿದ ರಾಹುಲ್ ತ್ರಿಪಾಠಿಗೆ ಮಿಥುನ್ ಪೆವಿಲಿಯನ್ ಹಾದಿ ತೋರಿಸಿದರು. ತ್ರಿಪಾಠಿ, ಮಿಥುನ್‌ಗೆ ಬಲಿಯಾದ ನಾಲ್ಕನೆ ದಾಂಡಿಗ ಎನಿಸಿಕೊಂಡರು.

47ನೆ ಓವರ್‌ನ 2ನೆ ಎಸೆತದಲ್ಲಿ ಚಿರಾಗ್ ಖುರಾನ(4) ವಿಕೆಟ್ ಉಡಾಯಿಸಿದ ಮಿಥುನ್ 5 ವಿಕೆಟ್ ಗೊಂಚಲು ಪಡೆದರು. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರೋಹಿತ್ ಮೊಟ್ವಾನಿ(ಅಜೇಯ 49, 75 ಎಸೆತ, 9 ಬೌಂಡರಿ)ಏಕಾಂಗಿ ಹೋರಾಟ ನೀಡಿದರು. ಅವರಿಗೆ ಮತ್ತೊಂದು ತುದಿಯಲ್ಲಿ ಸರಿಯಾದ ಸಾಥ್ ಸಿಗಲಿಲ್ಲ. ನಾಯಕ ವಿನಯ್ ಕುಮಾರ್ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಬಳಿಸಿ ಮಹಾರಾಷ್ಟ್ರವನ್ನು 245 ರನ್‌ಗೆ ಕಟ್ಟಿಹಾಕಿ ತಂಡದ ಗೆಲುವಿಗೆ ಮುನ್ನುಡಿ ಬರೆದರು. ಚೊಚ್ಚಲ ತ್ರಿಶತಕ ಕೊಡುಗೆ ನೀಡಿದ ಆರಂಭಿಕ ಆಟಗಾರ ಮಾಯಾಂಕ್ ಅಗರವಾಲ್ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 628 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಲು ನೆರವಾದರು. ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 383 ರನ್ ಬೃಹತ್ ಮುನ್ನಡೆಯನ್ನು ಪಡೆಯಿತು. ಮಹಾರಾಷ್ಟ್ರ ಎರಡನೆ ಇನಿಂಗ್ಸ್ ನಲ್ಲಿ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಗಿ ನಾಲ್ಕನೆ ದಿನದಾಟದಲ್ಲಿ ಬೇಗನೆ ತನ್ನ ಹೋರಾಟ ಕೊನೆಗೊಳಿಸಿತು.

ಸಂಕ್ಷಿಪ್ತ ಸ್ಕೋರ್

►ಮಹಾರಾಷ್ಟ್ರ ಮೊದಲ ಇನಿಂಗ್ಸ್: 245/10

►ಕರ್ನಾಟಕ ಮೊದಲ ಇನಿಂಗ್ಸ್: 628/5 ಡಿಕ್ಲೇರ್

►ಎರಡನೆ ಇನಿಂಗ್ಸ್: 66.2 ಓವರ್‌ಗಳಲ್ಲಿ 247/10

(ಋತುರಾಜ್ ಗಾಯಕ್ವಾಡ್ 65, ರಾಹುಲ್ ತ್ರಿಪಾಠಿ 51,ರೋಹಿತ್ ಮೊಟ್ವಾನಿ ಅಜೇಯ 49, ಮಿಥುನ್ 5-57, ರೋಹಿತ್ ಮೋರೆ 2-34)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News