×
Ad

ಸೌದಿಯ ಶತಕೋಟ್ಯಾಧಿಪತಿ ರಾಜಕುಮಾರ ಅಲ್‌ವಾಲೀದ್‌ ಬಿನ್‌ ತಲಾಲ್‌ ಸೇರಿದಂತೆ ಹಲವರ ಸೆರೆ

Update: 2017-11-05 12:36 IST

ರಿಯಾದ್, ನ.5: ಶನಿವಾರ ನಡೆಸಲಾದ ಭ್ರಷ್ಟಾಚಾರ ವಿರೋಧಿ ಅಭಿಯಾನದಲ್ಲಿ ಸೌದಿ ಅರೇಬಿಯಾದ 11 ರಾಜಕುಮಾರರನ್ನು ಹಾಗೂ ಸುಮಾರು 12 ಸಚಿವರನ್ನು ಬಂಧಿಸಲಾಗಿದೆ. ಬಂಧಿತ ರಾಜಕುಮಾರರು ನಿರ್ವಹಿಸುತ್ತಿದ್ದ ಉನ್ನತಾಧಿಕಾರವನ್ನು ಕಿತ್ತುಕೊಳ್ಳಲಾಗಿದೆ ಎಂದು ಸರಕಾರಿ ಸ್ವಾಮ್ಯದ ಅಲ್ -ಅರೇಬಿಯಾ ವಾರ್ತಾವಾಹಿನಿ ವರದಿಮಾಡಿದೆ.

ಸೌದಿಯ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ನೇತೃತ್ವದಲ್ಲಿ ನೂತನ ಭ್ರಷ್ಟಾಚಾರ ವಿರೋಧಿ ಸಮಿತಿಯನ್ನು ರಚಿಸಲಾಗಿದ್ದು ಈ ಸಮಿತಿಯು ನೀಡಿದ ವರದಿಯ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

   ಜಿದ್ದಾದಲ್ಲಿ 2009ರಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿ ಸಂತ್ರಸ್ತರಿಗೆ ಹಾಗೂ ಕಳೆದ ಕೆಲ ವರ್ಷಗಳಿಂದ ಮಾರಕವಾಗಿ ಹಬ್ಬಿರುವ ‘ಮಿಡ್ಲ್ ಈಸ್ಟ್ ರೆಸಿಪಿರೇಟರಿ ಸಿಂಡ್ರೋಮ್(ಎಂಇಆರ್‌ಎಸ್)’ ಮಾರಕ ವೈರಾಣು ದುರಂತದಲ್ಲಿ ಸಂತ್ರಸ್ತರಾದವರಿಗೆ ಪರಿಹಾರ ವಿತರಿಸುವ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಬಗ್ಗೆ ಸಮಿತಿ ತನಿಖೆ ನಡೆಸಿತ್ತು. ಆರೋಪಿಗಳ ವಿರುದ್ಧ ಬಂಧನ ವಾರಂಟ್ ಜಾರಿಯಾಗಬಹುದು ಹಾಗೂ ಸಂಚಾರಕ್ಕೆ ನಿರ್ಬಂಧ ವಿಧಿಸಬಹುದು ಎಂದು ಮೂಲಗಳು ತಿಳಿಸಿವೆ. ಅಲ್ಲದೆ ನ್ಯಾಯಾಲಯಕ್ಕೆ ಪ್ರಕರಣವನ್ನು ವರ್ಗಾಯಿಸುವವರೆಗೆ ಬ್ಯಾಂಕ್ ಖಾತೆ ಸ್ತಂಭನ, ನಿಧಿ ವರ್ಗಾಯಿಸಿದ ಪ್ರಕರಣಗಳ ಬಗ್ಗೆ ತನಿಖೆ ಮತ್ತು ಭವಿಷ್ಯದಲ್ಲಿ ನಿಧಿ ವರ್ಗಾಯಿಸದಂತೆ ತಡೆಯುವುದು ಅಥವಾ ಯಾವುದೇ ಅಕ್ರಮ ನಡೆಯದಂತೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಸಮಿತಿ ಹೊಂದಿದೆ.

ಬಂಧಿಸಲ್ಪಟ್ಟ ಅಥವಾ ಪದಚ್ಯುತಗೊಂಡ ಪ್ರಮುಖರು

ರಾಜಕುಮಾರ ಮಿತಾಬ್ ಬಿನ್ ಅಬ್ದುಲ್ಲಾ: ಸೌದಿ ನ್ಯಾಷನಲ್ ಗಾರ್ಡ್(ಶ್ವೇತ ಸೇನೆ ಎಂದೂ ಕರೆಯಲಾಗುತ್ತದೆ)ನ ಮಾಜಿ ಮುಖ್ಯಸ್ಥ . ದಿವಂಗತ ರಾಜ ಅಬ್ದುಲ್ಲಾರ ಪುತ್ರ. ತಂದೆಯ ಮರಣಾನಂತರ ಇವರೇ ರಾಜಸಿಂಹಾಸನ ಏರುವರೆಂದು ನಿರೀಕ್ಷಿಸಲಾಗಿತ್ತು. ಇದೀಗ ಇವರ ಸ್ಥಾನದಲ್ಲಿ ರಾಜಕುಮಾರ ಖಾಲಿದ್ ಬಿನ್ ಅಯಫ್ ಅವರು ಶ್ವೇತಸೇನೆಯ ಮುಖ್ಯಸ್ಥರಾಗಿ ನೇಮಕವಾಗಿದ್ದಾರೆ.

ರಾಜಕುಮಾರ ಅಲ್‌ವಲೀದ್ ಬಿನ್ ತಲಾಲ್: ಪ್ರಭಾವಿ ಉದ್ಯಮಿಯಾಗಿರುವ ತಲಾಲ್ ಆ್ಯಪಲ್, ಟ್ವಿಟರ್, ಸಿಟಿಗ್ರೂಪ್ ಮುಂತಾದ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಬಂಡವಾಳ ಹೂಡಿದ್ದಾರೆ ಎನ್ನಲಾಗುತ್ತಿದ್ದು ವಿಶ್ವದ ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರೆನಿಸಿದ್ದಾರೆ.

ಆದಿಲ್ ಫಕ್ಹೀ: ಆರ್ಥಿಕ ಮತ್ತು ಯೋಜನಾ ಸಚಿವ. ಇಂಜಿನಿಯರಿಂಗ್ ಪದವೀಧರರಾಗಿರುವ ಇವರು ಈ ಹಿಂದೆ ಕಾರ್ಮಿಕ ಹಾಗೂ ಆರೋಗ್ಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು. ಇವರ ಸ್ಥಾನದಲ್ಲಿ ಮುಹಮ್ಮದ್ ಅಲ್-ತುವೈಜ್ರಿ ನೇಮಕಗೊಂಡಿದ್ದಾರೆ.

ಅಡ್ಮಿರಲ್ ಅಬ್ದುಲ್ಲಾ ಅಲ್-ಸುಲ್ತಾನ್: ಸೌದಿ ನೌಕಾಪಡೆಯ ಮಾಜಿ ಕಮಾಂಡರ್. ಇವರ ಸ್ಥಾನದಲ್ಲಿ ಅಡ್ಮಿರಲ್ ಫಹದ್ ಬಿನ್ ಅಬ್ದುಲ್ಲಾ ನೇಮಕಗೊಂಡಿದ್ದಾರೆ.

‘ದೊರೆ ಭ್ರಷ್ಟ್ರಾಚಾರದ ವಿರುದ್ಧ ಹೋರಾಡುತ್ತಿದ್ದಾರೆ’

 ಸೌದಿ ದೊರೆ ಭ್ರಷ್ಟಾಚಾರ ವಿರೋಧಿ ಸಮಿತಿ ರಚಿಸಿರುವ ಘೋಷಣೆ ಮಾಡಿದ ಕೆಲ ಗಂಟೆಗಳಲ್ಲೇ- ದೊರೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ ಎಂಬ ಹ್ಯಾಶ್‌ಟ್ಯಾಗ್ ಲೈನ್‌ಗೆ ವಿಶ್ವದಾದ್ಯಂತ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ರವಿವಾರದವರೆಗೆ 5,36,000 ಬಾರಿ ಹ್ಯಾಶ್‌ಟ್ಯಾಗ್ ಲೈನನ್ನು ಬಳಸಲಾಗಿದ್ದು ಸೌದಿ ದೊರೆ ಮತ್ತು ಯುವರಾಜನ ಚಿತ್ರವನ್ನು ನೆಟ್ಟಿಗರು ಶೇರ್ ಮಾಡಿಕೊಂಡರು. ಸೌದಿ ಅರೇಬಿಯಾದಲ್ಲಿ ಟ್ವಿಟರ್ ಬಳಕೆದಾರರು ದೊರೆಯ ಈ ಆದೇಶವನ್ನು ಒಪ್ಪಿಕೊಂಡಿದ್ದಾರೆ. ‘ದೃಢ ನಿರ್ಧಾರದ ಸಲ್ಮಾನ್’ ಎಂಬ ಹ್ಯಾಶ್‌ಟ್ಯಾಗ್ ಕೂಡಾ ಜನಪ್ರಿಯವಾಗಿದೆ. ಸೌದಿ ದೊರೆ ಕೈಗೊಂಡ ನಿರ್ಧಾರದಿಂದ ಆಡಳಿತದ ಬಗ್ಗೆ ವಿಶ್ವಾಸ ಹೆಚ್ಚಿದೆ ಹಾಗೂ ಸೌದಿಯಲ್ಲಿ ಇರುವ ಹೂಡಿಕೆದಾರರ ಪರವಾದ ಪರಿಸ್ಥಿತಿಯನ್ನು ಸಂರಕ್ಷಿಸಿದೆ ಎಂದು ಈ ಸೌದಿಯ ವಿತ್ತ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಅಲ್-ಅರೇಬಿಯಾ ಟಿವಿ ಚಾನೆಲ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News