ಬರ್ಥ್ ಡೇ ಬಾಯ್ ಕೊಹ್ಲಿ: 30ಕ್ಕೆ ಕಾಲಿಟ್ಟ ಭಾರತದ ಅತ್ಯಂತ ಯಶಸ್ವಿ ಕ್ರಿಕೆಟಿಗ
ಭಾರತದ ಟೆಸ್ಟ್,ಏಕದಿನ ಮತ್ತು ಟಿ-20 ಕ್ರಿಕೆಟ್ ತಂಡಗಳ ಯಶಸ್ವಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ರವಿವಾರ 29ನೇ ಹುಟ್ಟುಹಬ್ಬದ ಸಂಭ್ರಮ. 30ಕ್ಕೆ ಕಾಲಿರಿಸಿರುವ ಈ ಜನಪ್ರಿಯ ಕ್ರಿಕೆಟಿಗನ ಬಗ್ಗೆ ಗೊತ್ತಿರಲೇಬೇಕಾದ ಕೆಲವು ಮಾಹಿತಿ ಗಳಿಲ್ಲಿವೆ.
►ಅತ್ಯಂತ ವೇಗದ ಏಕದಿನ ಶತಕ
ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತೀಯನೋರ್ವನ ಅತ್ಯಂತ ವೇಗದ ಶತಕದ ದಾಖಲೆ ಕೊಹ್ಲಿಯವರ ಹೆಸರಿನಲ್ಲಿದೆ. 2013ರಲ್ಲಿ ಜೈಪುರದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ 52 ಎಸೆತಗಳಲ್ಲಿ 100 ರನ್‌ಗಳನ್ನು ಗಳಿಸುವ ಮೂಲಕ ಕೊಹ್ಲಿ ಈ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದರು.
►ಬೆಸ್ಟ್ ಡ್ರೆಸ್ಡ್
2012ರಲ್ಲಿ ಅತ್ಯುತ್ತಮ ಉಡುಪು ಧರಿಸುವ ವಿಶ್ವದ 10 ಅಗ್ರ ವ್ಯಕ್ತಿಗಳ ಪಟ್ಟಿಯಲ್ಲಿ ಕೊಹ್ಲಿ ಸ್ಥಾನ ಪಡೆದಿದ್ದರು. ಈ ಪಟ್ಟಿಯಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಬರಾಕ್ ಬಬಾಮಾ ಕೂಡ ಇದ್ದರು.
►ಅತ್ಯಂತ ವೇಗದ 5000 ರನ್‌ಗಳ ಸರದಾರ
ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 1000,3000,4000 ಮತ್ತು 5000 ರನ್ ಗಳಿಕೆ ಮೈಲಿಗಲ್ಲುಗಳನ್ನು ಅತ್ಯಂತ ವೇಗವಾಗಿ ತಲುಪಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯನ್ನು ಮುಡಿಗೇರಿಸಿಕೊಂಡಿದ್ದಾರೆ. 2017ರಲ್ಲಿ ನೇಪಿಯರ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ತನ್ನ 18ನೇ ಏಕದಿನ ಶತಕದತ್ತ ಮುನ್ನುಗ್ಗುತ್ತಿದ್ದಾಗ ಅವರು ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 5000 ರನ್‌ಗಳನ್ನು ಸೂರೆಗೈದ ಭಾರತೀಯ ಆಟಗಾರನಾಗಿ ಸಾಧನೆಯನ್ನು ಮಾಡಿದ್ದಾರೆ.
►ಬ್ರಾಂಡ್ ಮೌಲ್ಯ ಮೆಸ್ಸಿಗಿಂತ ಹೆಚ್ಚು
ಕೊಹ್ಲಿ ಇಂದು ಅತ್ಯಂತ ಹೆಚ್ಚಿನ ಬ್ರಾಂಡ್ ಮೌಲ್ಯ ಹೊಂದಿರುವ ಕ್ರೀಡಾಪಟು ಗಳಲ್ಲಿ ಒಬ್ಬರಾಗಿದ್ದಾರೆ. ಫೋರ್ಬ್ಸ್ ಸಿದ್ಧಗೊಳಿಸಿರುವ ಇಂತಹ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿ ಅರ್ಜೆಂಟಿನಿಯನ್, ಬಾರ್ಸಿಲೋನಾ ಫುಟ್ಬಾಲ್ ದಂತಕಥೆ ಲಿಯೊನಿಲ್ ಮೆಸ್ಸಿ ಅವರಿಗಿಂತ ಮೇಲಿನ ಸ್ಥಾನದಲ್ಲಿದ್ದಾರೆ.
►ಹ್ಯಾಮಿಲ್ಟನ್ ಜೊತೆ ಪೈಪೋಟಿಯಲ್ಲಿ
ಈ ವರ್ಷದ ಆರಂಭದಲ್ಲಿ ವಿಶ್ವದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವ ಎರಡನೇ ಕ್ರೀಡಾಪಟು ಎಂಬ ರೇಟಿಂಗ್‌ಗೆ ಪಾತ್ರರಾಗಿರುವ ಕೊಹ್ಲಿ ಮೊದಲ ಸ್ಥಾನದಲ್ಲಿರುವ ಫಾರ್ಮುಲಾ ವನ್ ರೇಸ್‌ನ ಲೂಯಿಸ್ ಹ್ಯಾಮಿಲ್ಟನ್‌ಗೆ ಪೈಪೋಟಿ ನೀಡುತ್ತಿದ್ದಾರೆ.
►ಮೊದಲ ವಿಶ್ವಕಪ್ ಪಂದ್ಯದಲ್ಲೇ ಶತಕ ಸಿಡಿಸಿದ ಮೊದಲ ಭಾರತೀಯ
ತನ್ನ ಮೊದಲ ವಿಶ್ವಕಪ್ ಪಂದ್ಯದಲ್ಲೇ ಶತಕವನ್ನು ಬಾರಿಸಿದ ಮೊದಲ ಭಾರತೀಯ ಎಂಬ ಕಿರೀಟ್ ಕೊಹ್ಲಿ ಮುಡಿಗೇರಿದೆ. 2011ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆಯನ್ನು ಮೆರೆದಿದ್ದರು.
►ಆಕಸ್ಮಿಕವಾಗಿ ಒಲಿದ ನಾಯಕ ಪಟ್ಟ
ಕೊಹ್ಲಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕ ಪಟ್ಟ ಸಿಕ್ಕಿದ್ದು ಆಕಸ್ಮಿಕವಾಗಿ. 2013ರಲ್ಲಿ ಆಗಿನ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಗಾಯಗೊಂಡು ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಆಡಲು ಸಾಧ್ಯವಾಗದಿದ್ದಾಗ ಕೊಹ್ಲಿ ನಾಯಕನ ಜವಾಬ್ದಾರಿಯನ್ನು ನಿರ್ವಹಿಸಿದ್ದರು.