ಭಾರತದ ವನಿತೆಯರಿಗೆ ಏಷ್ಯಾಕಪ್ ಹಾಕಿ ಕಿರೀಟ
ಕಾಕಮಿಗಾರ(ಜಪಾನ್) , ನ.5: ಭಾರತದ ಮಹಿಳಾ ಹಾಕಿ ತಂಡ ಇಲ್ಲಿ ರವಿವಾರ ನಡೆದ ಏಷ್ಯಾಕಪ್ ಹಾಕಿ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಚೀನಾ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಅಂತರದಲ್ಲಿ ಮಣಿಸಿ ಪ್ರಶಸ್ತಿಯನ್ನು ಬಾಚಿಕೊಂಡಿದೆ.
ಈ ಗೆಲುವಿನೊಂದಿಗೆ ಭಾರತದ ಮಹಿಳಾ ಹಾಕಿತಂಡ 2018ರಲ್ಲಿ ನಡೆಯಲಿರುವ ಎಫ್‌ಐಎಚ್ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
ಭಾರತ ಎರಡನೆ ಬಾರಿ ಪ್ರಶಸ್ತಿಯನ್ನು ಉಳಿಸಿಕೊಂಡಿದೆ. ಭಾರತ 2004ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ಏಷ್ಯಾ ಕಪ್ ಹಾಕಿ ಟೂರ್ನಮೆಂಟ್‌ನಲ್ಲಿ ಜಪಾನನ್ನು 1-0 ಅಂತರದಲ್ಲಿ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು. 2009ರಲ್ಲಿ ಚೀನಾ ವಿರುದ್ಧ ಸೋಲು ಅನುಭವಿಸುವ ಮೂಲಕ ಭಾರತ ಪ್ರಶಸ್ತಿ ಕಳೆದುಕೊಂಡಿತ್ತು. ಇದೀಗ ಚೀನಾಕ್ಕೆ ಭಾರತ ಸೋಲುಣಿಸುವ ಮೂಲಕ ಸೋಲಿಗೆ ಪ್ರತೀಕಾರ ತೀರಿಸಿಕೊಂಡಿದೆ. ಇಂದು ನಡೆದ ಪಂದ್ಯದಲ್ಲಿ ಭಾರತದ ನವಜೋತ್ ಕೌರ್ ಪ್ರಥಮಾರ್ಧದ 25ನೆ ನಿಮಿಷದಲ್ಲಿ ಫೀಲ್ಡ್ ಗೋಲು ದಾಖಲಿಸುವ ಮೂಲಕ ಭಾರತದ ಗೋಲು ಖಾತೆಯನ್ನು ತೆರದಿದ್ದರು. 47ನೆ ನಿಮಿಷದಲ್ಲಿ ಚೀನಾದ ಟಿಯಾಂಟಿಯನ್ ಲುವೊ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಜಮೆ ಮಾಡಿ 1-1 ಸಮಬಲ ಸಾಧಿಸಲು ನೆರವಾದರು. ತಂಡ 1-1 ಗೋಲುಗಳಿಂದ ಸಮಬಲದಲ್ಲಿ ಸಮಾಪ್ತಿಗೊಂಡಾಗ ಫಲಿತಾಂಶ ನಿರ್ಧರಿಸಲು ಪೆನಾಲ್ಟಿ ಶೂಟೌಟ್ ಮೊರೆ ಹೋಗಬೇಕಾಯಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತ ಗೆಲುವಿನ ನಗೆ ಬೀರಿತು. ಒಂದು ಹಂತದಲ್ಲಿ ಭಾರತ ಮತ್ತು ಚೀನಾ 4-4 ಸಮಬಲ ಸಾಧಿಸಿತ್ತು. ಕೊನೆಯಲ್ಲಿ ರಾಣಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಮೂಲಕ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.