ಗೋವಾ: ವಿಕಲಾಂಗ ಬಾಲಕಿಗೆ ದೇವಳ ಪ್ರವೇಶ ನಿರಾಕರಣೆ
ಪಣಜಿ, ನ.6: ಓಡಾಟಕ್ಕೆ ಗಾಲಿಕುರ್ಚಿಯನ್ನು ಅವಲಂಬಿಸುವ ವಿಕಲಾಂಗ ಬಾಲಕಿಗೆ ಗೋವಾದ ಮಂಗ್ವೇಷಿ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಲಾದ ಘಟನೆ ನಡೆದಿದ್ದು, ಈ ಬಗ್ಗೆ ಬಾಲಕಿಯ ಪೋಷಕರು ದೂರು ದಾಖಲಿಸಿದ್ದಾರೆ.
ಸುಭದ ಕೇಸ್ಕರ್ ಎಂಬವರು ಕುಟುಂಬ ಸದಸ್ಯರ ಸಹಿತ ಗೋವಾದ ಮಂಗ್ವೇಷಿ ದೇವಸ್ಥಾನಕ್ಕೆ ಭೇಟಿ ನೀಡಲು ಆಗಮಿಸಿದ್ದರು. ಇವರ ಪುತ್ರಿ ಸಾನಿಕಾ ವಿಕಲಾಂಗೆಯಾಗಿರುವ ಕಾರಣ ಗಾಲಿಕುರ್ಚಿಯ ಅಗತ್ಯವಿದೆ. ಆದರೆ ಗಾಲಿಕುರ್ಚಿ ‘ವಾಹನ’ ವರ್ಗಕ್ಕೆ ಸೇರುವ ಕಾರಣ, ಗಾಲಿಕುರ್ಚಿ ಸಹಿತ ದೇವಸ್ಥಾನಕ್ಕೆ ಪ್ರವೇಶಿಸುವಂತಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಅನಿಲ್ ಕೆಂಕ್ರೆ ಎಂಬವರು ತಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ, ನೀವು ದೇವಸ್ಥಾನಕ್ಕೆ ಭೇಟಿ ನೀಡಬೇಕೆಂದು ಯಾರೂ ಆಹ್ವಾನಿಸಿಲ್ಲ ಎಂದು ಅನಿಲ್ ನಿಂದಿಸಿದ್ದಾರೆ ಎಂದೂ ಆರೋಪಿಸಲಾಗಿದೆ.
ಬಾಲಕಿಯನ್ನು ನಿಂದಿಸಿರುವ, ತಾರತಮ್ಯದ ವರ್ತನೆ ತೋರಿರುವ ಹಾಗೂ ಪ್ರಾರ್ಥನೆಯ ಹಕ್ಕನ್ನು ನಿರಾಕರಿಸುವ ಮೂಲಕ ಸಂವಿಧಾನಬದ್ಧ ಹಕ್ಕನ್ನು ಉಲ್ಲಂಘಿಸಿರುವ ಅನಿಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಗೋವಾದ ಅಂಗವಿಕಲರ ಹಕ್ಕಿನ ಸಂಘಟನೆ(ಡಿಆರ್‌ಎಜಿ) ಆಗ್ರಹಿಸಿದೆ.