ವಿವಿಪಿಎಟಿ ಮೆಷಿನ್‌ಗಳಿಗೆ ಸೂಕ್ತ ಭದ್ರತೆ ನೀಡಿ: ವೀರಭದ್ರ ಸಿಂಗ್ ಆಗ್ರಹ
ಧರ್ಮಸಾಲಾ, ನ. 6: ವಿಧಾನ ಸಭೆ ಚುನಾವಣೆ ನಡೆಯಲಿರುವ ನವೆಂಬರ್ 9ರಿಂದ ಮತ ಎಣಿಕೆ ನಡೆಯಲಿರುವ ಡಿಸೆಂಬರ್ 18ರ ವರೆಗೆ ವಿವಿಪಿಎಟಿ ಮೆಷಿನ್‌ಗೆ ಸೂಕ್ತ ಭದ್ರತೆಯ ಭರವಸೆ ನೀಡುವಂತೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ವೀರಭದ್ರ ಸಿಂಗ್ ರವಿವಾರ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.
ಚುನಾವಣಾ ಆಯೋಗದ ಬಗ್ಗೆ ನಂಬಿಕೆ ವ್ಯಕ್ತಪಡಿಸಿರುವ ಅವರು, ಚುನಾವಣೆ ದಿನಾಂಕ ಹಾಗೂ ಮತ ಎಣಿಕೆ ದಿನಾಂಕದ ನಡುವೆ ದೀರ್ಘಾವಧಿಯ ಅಂತರ ಇದೆ. ವಿವಿಪಿಎಟಿ ಮೆಷಿನ್‌ಗಳಿಗೆ ಸೂಕ್ತ ಸುರಕ್ಷತೆ ನೀಡುವ ಅಗತ್ಯತೆ ಇದೆ ಎಂದಿದ್ದಾರೆ.
ವಿಧಾನ ಸಭೆ ಚುನಾವಣೆ ನಡೆಯಲಿರುವ ಹಿಮಾಚಲ ಪ್ರದೇಶದಲ್ಲಿ ರವಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವನ್ನು ಟೀಕಿಸಿರುವ ಸಿಂಗ್ ಅವರು, ಮೋದಿ ಬಳಸುವ ಭಾಷೆ ಅವರ ಸ್ಥಾನಕ್ಕೆ ಹೋಲಿಕೆಯಾಗುತ್ತಿಲ್ಲ. ಇದರಿಂದ ಅವರ ಪಕ್ಷದ ಗುಣಮಟ್ಟವನ್ನು ಕೂಡ ತಿಳಿದುಕೊಳ್ಳಬಹುದು ಎಂದಿದ್ದಾರೆ.
ಹಿಮಾಚಲ ಪ್ರದೇಶದ ಚುನಾವಣೆಯನ್ನು ರವಿವಾರ ಒಂದೇ ಭಾಗದ ಸ್ಪರ್ಧೆ ಎಂದು ವ್ಯಾಖ್ಯಾನಿಸಿರುವ ನರೇಂದ್ರ ಮೋದಿ, ಕಾಂಗ್ರೆಸ್ ರಣರಂಗದಿಂದ ಪಲಾಯನಗೈಯ್ಯುತ್ತಿದೆ ಎಂದು ಹೇಳಿದ್ದರು.
ವಿವಿಪಿಎಟಿ ಮೆಷಿನ್ ವ್ಯಕ್ತಿ ಮತ ಹಾಕಿದ ಪಕ್ಷದ ಚಿಹ್ನೆಯುಳ್ಳ ಚೀಟಿಯನ್ನು ನೀಡುತ್ತದೆ. ಈ ಚೀಟಿಯನ್ನು ಮತದಾರ ಮನೆಗೆ ಕೊಂಡು ಹೋಗದೆ, ಮತದಾನದ ಪೆಟ್ಟಿಗೆಯಲ್ಲಿ ಹಾಕಬೇಕು.