ಚುನಾವಣಾ ಆಯೋಗಕ್ಕೆ ಗುಜರಾತ್ ಹೈಕೋರ್ಟ್ ನೋಟಿಸ್

Update: 2017-11-06 19:06 GMT

ಅಹ್ಮದಾಬಾದ್, ನ. 6: ದೋಷಪೂರಿತ ಇವಿಎಂ ಹಾಗೂ ವಿವಿಪಿಎಟಿಗಳಿಗೆ ಮೊಹರು ಮಾಡಬೇಕು ಹಾಗೂ ಮುಂದಿನ ವಿಧಾನ ಸಬಾ ಚುನಾವಣೆಯಲ್ಲಿ ಅವುಗಳನ್ನು ಬಳಸಲು ಅವಕಾಶ ನೀಡಬಾರದು ಎಂದು ಕೋರಿ ಕಾಂಗ್ರೆಸ್‌ನ ರಾಜ್ಯ ಘಟಕ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಗುಜರಾತ್ ನ್ಯಾಯಾಲಯ ಸೋಮವಾರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.

ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅಕಿಲ್ ಖುರೇಶಿ ಹಾಗೂ ಎ.ಜೆ. ಕೋಗ್ಜಿ ಅವರನ್ನೊಳಗೊಂಡ ವಿಭಾಗೀಯ ಪೀಠ ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಹಾಗೂ ಕೇಂದ್ರ ಸರಕಾರಕ್ಕೆ ನೋಟಿಸು ಜಾರಿ ಮಾಡಿದೆ.

ನವೆಂಬರ್ 13ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಪೀಠ ನಿರ್ದೇಶಿಸಿದೆ.

 ಯಾವುದೇ ಮೋಸ ತಪ್ಪಿಸಲು ದೋಷಪೂರಿತ ಮೆಷಿನ್‌ಗಳನ್ನು ಪರಿಶೀಲಿಸಲು ತಜ್ಞರ ಸಮಿತಿ ರಚಿಸುವಂತೆ ಅಥವಾ ತಜ್ಞರ ಸಮಿತಿ ರಚಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶ ನೀಡುವಂತೆ ಕಾಂಗ್ರೆಸ್ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಮತದಾನ ಯಂತ್ರದಲ್ಲಿ ಮತ ತಿರುಚಲು ಅವಕಾಶ ನೀಡದಿರಲು ಮತದಾನ ಪತ್ರ ಬಳಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೂಡ ಕಾಂಗ್ರೆಸ್ ಮನವಿ ಮಾಡಿದೆ.

ಗುಜರಾತ್‌ನಲ್ಲಿ ಡಿಸೆಂಬರ್ 9 ಹಾಗೂ ಡಿಸೆಂಬರ್ 14ರಂದು ಎರಡು ಹಂತದಲ್ಲಿ ವಿಧಾನ ಸಭೆ ಚುನಾವಣೆ ನಡೆಯಿಲಿದೆ. ಮತ ಎಣಿಕೆ ಡಿಸೆಂಬರ್ 18ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News