ಅಗ್ರ 10 ಸ್ಥಾನ ಪಡೆಯಲು ಮರ್ರೆ, ಜೊಕೊವಿಕ್ ವಿಫಲ

Update: 2017-11-06 18:21 GMT

ಪ್ಯಾರಿಸ್, ನ.6: ಮಾಜಿ ನಂ.1 ಆಟಗಾರರಾದ ಬ್ರಿಟನ್‌ನ ಆಂಡಿ ಮರ್ರೆ ಮತ್ತು ಸರ್ಬಿಯಾದ ನೊವಾಕೊ ಜೊಕೊವಿಕ್ ಅವರು ಎಟಪಿ ರ್ಯಾಂಕಿಂಗ್‌ನಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಜೊಕೊವಿಕ್ 12ನೆ ಮತ್ತು ಮರ್ರೆ 16ನೆ ಸ್ಥಾನಕ್ಕೆ ಇಳಿದಿದ್ದಾರೆ.

30ರ ಹರೆಯದ ಮರ್ರೆ ಮೊದಲು ಮೂರನೆ ಸ್ಥಾನವನ್ನು ಹೊಂದಿದ್ದರು. ಆದರೆ ಇದೀಗ 13 ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಗಾಯದ ಕಾರಣದಿಂದಾಗಿ ಕಳೆದ ಜುಲೈನಿಂದ ಮರ್ರೆ ಸ್ಪರ್ಧಾತ್ಮಕ ಟೆನಿಸ್‌ನಿಂದ ದೂರ ಉಳಿದಿದ್ದಾರೆ.

ಮರ್ರೆ 2014 ಅಕ್ಟೋಬರ್‌ನಲ್ಲಿ ಇದೇ ರೀತಿ ಅಗ್ರ 10ರಲ್ಲಿ ಸ್ಥಾನ ಪಡೆಯುವಲ್ಲಿ ಎಡವಿದ್ದರು.

ಮೂರು ಬಾರಿ ಗ್ರಾನ್ ಸ್ಲಾಮ್ ಜಯಿಸಿರುವ ಮರ್ರೆ ಅವರು ಕಳೆದ ವಿಂಬಲ್ಡನ್‌ನಲ್ಲಿ ಕೊನೆಯ ಬಾರಿ ಆಡಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಸ್ಯಾಮ್ ಕುರ್ರೈ ವಿರುದ್ಧ ಸೋಲು ಅನುಭವಿಸಿದ್ದರು.

ಸ್ಪೇನ್‌ನ ರಫೆಲ್ ನಡಾಲ್ ನಂ.1 ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ. ಕಳೆದ ವಾರ ನಡೆದ ಪ್ಯಾರಿಸ್ ಮಾಸ್ಟರ್ಸ್‌ ಬಳಿಕ ನಡಾಲ್ ನಂ.1 ಸ್ಥಾನ ಪಡೆದಿದ್ದಾರೆ.

ಸ್ವಿಸ್‌ನ ರೋಜರ್ ಫೆಡರರ್ ಎರಡನೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

 ಗ್ಲಾಸ್ಗೋದಲ್ಲಿ ಮಂಗಳವಾರ ನಡೆಯಲಿರುವ ಸಹಾಯಾರ್ಥ ಪಂದ್ಯದಲ್ಲಿ ಫೆಡರರ್ ಮತ್ತು ಮರ್ರೆ ಮುಖಾಮುಖಿಯಾಗಲಿದ್ದಾರೆ. ಈ ಪಂದ್ಯದ ಬಳಿಕ ಅವರು ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯನ್ ಓಪನ್‌ಗೆ ತಯಾರಿ ಆರಂಭಿಸಲಿದ್ದಾರೆ.

ಜೊಕೊವಿಕ್ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಅವರು ವಿಂಬಲ್ಡನ್ ಕ್ವಾರ್ಟರ್ ಫೈನಲ್‌ನಲ್ಲಿ ಥಾಮಸ್ ಬೆರ್ಡಿಕ್ ವಿರುದ್ಧ ಸೆಣಸಾಡಲು ಸಾಧ್ಯವಾಗದೆ ಸ್ಪರ್ಧಾ ಕಣದಿಂದ ನಿವೃತ್ತರಾಗಿದ್ದರು.

12 ಗ್ರಾನ್ ಸ್ಲಾಮ್ ಗೆದ್ದುಕೊಂಡಿರುವ ಜೊಕೊವಿಕ್ ಮಾರ್ಚ್ 2007ರ ಬಳಿಕ ಅವರ ರ್ಯಾಂಕಿಂಗ್‌ನಲ್ಲಿ ಮೊದಲ ಬರಿ ಕುಸಿತ ಕಂಡಿದೆ. ಇದೀಗ ಅವರು 12ನೆ ಸ್ಥಾನ ಪಡೆದಿದ್ದಾರೆ.ಜೊಕೊವಿಕ್ ಅಬುಧಾಬಿಯಲ್ಲಿ ಮುಂದಿನ ತಿಂಗಳು ನಡೆಯಲಿರುವ ವರ್ಲ್ಡ್‌ಟೆನಿಸ್ ಚಾಂಪಿಯನ್‌ಶಿಪ್ ಪ್ರದರ್ಶನ ಪಂದ್ಯದಲ್ಲಿ ಆಡುವ ಮೂಲಕ ಸ್ಪರ್ಧಾತ್ಮಕ ಟೆನಿಸ್‌ಗೆ ವಾಪಸಾಗುವ ನಿರೀಕ್ಷೆಯಲ್ಲಿದ್ದಾರೆ.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News