2ಜಿ ಸ್ಪೆಕ್ಟ್ರಂ ಹಂಚಿಕೆ ಪ್ರಕರಣ ಡಿ.5ಕ್ಕೆ ಮುಂದೂಡಿಕೆ

Update: 2017-11-07 13:04 GMT

ಹೊಸದಿಲ್ಲಿ,ನ.7: ಮಾಜಿ ದೂರಸಂಪರ್ಕ ಸಚಿವ ಎ.ರಾಜಾ, ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ, ಯುನಿಟೆಕ್‌ನ ಆಡಳಿತ ನಿರ್ದೇಶಕ ಸಂಜಯ ಚಂದ್ರ, ಬಾಲಿವುಡ್ ನಿರ್ಮಾಪಕ ಕರೀಂ ಮೊರಾನಿ ಮತ್ತು ಇತರರ ವಿರುದ್ಧದ 2ಜಿ ಸ್ಪೆಕ್ಟ್ರಂ ಹಂಚಿಕೆ ಪ್ರಕರಣವನ್ನು ಮಂಗಳವಾರ ಇಲ್ಲಿಯ ವಿಶೇಷ ನ್ಯಾಯಾಲಯವು ಡಿ.5ಕ್ಕೆ ಮುಂದೂಡಿದೆ.

ತೀರ್ಪು ಇನ್ನೂ ಸಿದ್ಧವಾಗಿಲ್ಲ. ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದಾಖಲೆಗಳು ಅಗಾಧ ಪ್ರಮಾಣದಲ್ಲಿದ್ದು, ತಾಂತ್ರಿಕ ಸ್ವರೂಪದ್ದಾಗಿವೆ ಮತ್ತು ಅವುಗಳ ಪರಿಶೀಲನೆ ಇನ್ನೂ ನಡೆಯುತ್ತಿದೆ. ಅದು ಪೂರ್ಣಗೊಳ್ಳಲು ಇನ್ನೂ 2-3 ವಾರ ಕಾಲಾವಕಾಶ ಬೇಕಾಗಬ ಹುದು ಎಂದು ಹೇಳಿದ ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ಅವರು ಪ್ರಕರಣವನ್ನು ಮುಂದೂಡಿದರು.

ಮುಂದಿನ ವಿಚಾರಣೆಯ ದಿನದಂದು ತಾನು ತೀರ್ಪು ಪ್ರಕಟಣೆಯ ದಿನಾಂಕವನ್ನು ನಿಗದಿಪಡಿಸಬಹುದು ಎಂದು ನ್ಯಾಯಾಲಯವು ತಿಳಿಸಿತು. ಸಂಜಯ ಚಂದ್ರ ಮತ್ತು ಕರೀಂ ಮೊರಾನಿ ಅವರನ್ನು ಮುಂದಿನ ವಿಚಾರಣೆಯ ದಿನಾಂಕದಂದು ತನ್ನೆದುರು ಹಾಜರುಪಡಿಸುವಂತೆ ನ್ಯಾಯಾಲಯವು ವಾರಂಟ್‌ಗಳನ್ನು ಹೊರಡಿಸಿತು.

ವಿಶೇಷ ನ್ಯಾಯಾಲಯವು ಅ.19ರಂದು ಪ್ರಕರಣದ ವಿಚಾರಣೆಯನ್ನು ಪೂರ್ಣ ಗೊಳಿಸಿತ್ತು.

ನ್ಯಾಯಾಲಯದಲ್ಲಿ ಮೂರು ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಈ ಪೈಕಿ ಎರಡನ್ನು ಸಿಬಿಐ ಮತ್ತು ಒಂದನ್ನು ಜಾರಿ ನಿರ್ದೇಶನಾಲಯ ದಾಖಲಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News