×
Ad

ಭಾರತೀಯ ಮಹಿಳೆಯರನ್ನು ಕಾಡುತ್ತಿದೆ ರಕ್ತಹೀನತೆ...

Update: 2017-11-07 18:26 IST

ಹೊಸದಿಲ್ಲಿ,ನ.7: ಭಾರತೀಯ ಮಹಿಳೆಯರನ್ನು ಪೌಷ್ಟಿಕತೆಯ ಕೊರತೆಯ ಗಂಭೀರ ಸಮಸ್ಯೆಯು ಕಾಡುತ್ತಿದೆ. ಒಂದೆಡೆ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದರೆ, ಇನ್ನೊಂದೆಡೆ ಮಹಿಳೆಯರು ತ್ವರಿತವಾಗಿ ಹೆಚ್ಚುತ್ತಿರುವ ಬೊಜ್ಜಿನಿಂದಾಗಿ ಕಾಯಿಲೆಗಳಿಗೆ ಗುರಿಯಾಗುತ್ತಿರುವುದು ಇನ್ನೊಂದು ಸಮಸ್ಯೆಯಾಗಿದೆ.

 ಜಾಗತಿಕ ಪೌಷ್ಟಿಕತೆ ವರದಿ 2017 ಬೆಟ್ಟು ಮಾಡಿರುವಂತೆ ಭಾರತದಲ್ಲಿ ರಕ್ತಹೀನತೆ ಯಿಂದ ಬಳಲುತ್ತಿರುವ ಮಹಿಳೆಯರ ಸಂಖ್ಯೆ ವಿಶ್ವದಲ್ಲಿಯೇ ಅತ್ಯಂತ ಹೆಚ್ಚು. ನಂತರದ ಸ್ಥಾನಗಳಲ್ಲಿ ಚೀನಾ, ಪಾಕಿಸ್ತಾನ, ನೈಜೀರಿಯಾ ಮತ್ತು ಇಂಡೋನೇಷ್ಯಾಗಳಿವೆ. ಭಾರತದಲ್ಲಿ ಸಂತಾನೋತ್ಪತ್ತಿ ವಯೋಗುಂಪಿನ ಮಹಿಳೆಯರ ಪೈಕಿ ಅರ್ಧಕ್ಕಿಂತಲೂ ಹೆಚ್ಚಿನವರು(ಶೇ.51) ರಕ್ತಹೀನತೆಯಿಂದ ಬಳಲುತ್ತಿದ್ದರೆ, ಶೇ.22ರಷ್ಟು ಮಹಿಳೆಯರು ಅತಿಯಾದ ತೂಕವನ್ನು ಹೊಂದಿದ್ದಾರೆ. ವರದಿಯು 140 ದೇಶಗಳಲ್ಲಿಯ ಸ್ಥಿತಿಗಳನ್ನು ವಿಶ್ಲೇಷಿಸಿದೆ.

ಸರಕಾರವು ಮಹಿಳೆಯರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆಯ ಸಮಸ್ಯೆಯನ್ನು ಗುರುತಿಸಲು ಆರಂಭಿಸಿದೆಯಾದರೂ ಅದನ್ನು ಬಗೆಹರಿಸುವುಲ್ಲಿ ಯಾವುದೇ ಪ್ರಗತಿ ಯಾಗಿಲ್ಲ ಎನ್ನುತ್ತಾರೆ ತಜ್ಞರು. ರಕ್ತಹೀನತೆಯಿಂದ ಬಳಲುತ್ತಿರುವ 15ರಿಂದ 49 ವರ್ಷ ವಯೋಗುಂಪಿನ ಮಹಿಳೆಯರ ಶೇಕಡಾವಾರು ಪ್ರಮಾಣ ಕೆಟ್ಟ ದಾಖಲೆಯಾಗಿದ್ದು, ಇದೇ ವೇಳೆ ವಯಸ್ಕ ಮಹಿಳೆಯರಲ್ಲಿ ಬೊಜ್ಜು ಮತ್ತು ಮಧುಮೇಹವನ್ನು ತಗ್ಗಿಸುವ ಗುರಿಸಾಧನೆಯಲ್ಲಿಯೂ ದೇಶವು ನಿರಾಶಾದಾಯಕ ಪ್ರದರ್ಶನ ನೀಡಿದೆ ಎನ್ನುವುದನ್ನು ವರದಿಯು ಪ್ರಮುಖವಾಗಿ ಬಿಂಬಿಸಿದೆ.

2016ರ ವರದಿಯಂತೆ ಭಾರತದಲ್ಲಿ ಸುಮಾರು ಶೇ.48ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದರು.

ಅಪೌಷ್ಟಿಕತೆ ನಿವಾರಣೆ ವಿಷಯದಲ್ಲಿ ನಿಷ್ಕ್ರಿಯವಾಗಿರುವಂತಿಲ್ಲ ಮತ್ತು ಈ ನಿಟ್ಟಿನಲ್ಲಿ ಸಾಗಬೇಕಾದ ದಾರಿ ದೂರವಿದೆ ಎನ್ನುವುದರ ಅರಿವು ಸರಕಾರಕ್ಕಿದೆ ಎಂದಿರುವ ವರದಿಯು, ಭಾರತದ ರಾಷ್ಟ್ರೀಯ ಪೋಷಕಾಂಶ ಕಾರ್ಯತಂತ್ರದ ಭಾಗವಾಗಿ ಅಪೌಷ್ಟಿಕತೆ ಮತ್ತು ಬೊಜ್ಜು ಈ ಎರಡೂ ಸವಾಲುಗಳನ್ನು ಅದು ಎದುರಿಸಬೇಕಿದೆ ಎನ್ನುವುದನ್ನು ಮುಖ್ಯವಾಗಿ ಬಿಂಬಿಸಿದೆ. ಅಪೌಷ್ಟಿಕತೆ ಕುರಿತಂತೆ ಅಸಮಾನತೆಯ ಬಿರುಕುಗಳನ್ನು ಮುಚ್ಚುವ ಪ್ರಮುಖ ಪ್ರಯತ್ನಗಳ ಅಗತ್ಯವಿದೆ ಎನ್ನುತ್ತಾರೆ ದಿಲ್ಲಿಯಲ್ಲಿರುವ ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ(ಐಎಫ್‌ಪಿಅರ್‌ಐ)ಯ ದಕ್ಷಿಣ ಏಷ್ಯಾ ಕಚೇರಿಯ ಹಿರಿಯ ಸಂಶೋಧನಾ ಫೆಲೊ ಪೂರ್ಣಿಮಾ ಮೆನನ್ ಹೇಳಿದರು.

ಆರೋಗ್ಯದ ಅರಿವಿನ ಕೊರತೆ, ನಿರಕ್ಷರತೆ ಮತ್ತು ಕಾಳಜಿಯ ವಿಷಯದಲ್ಲಿ ಸ್ವಂತಕ್ಕಿಂತ ಕುಟುಂಬಕ್ಕೆ ಆದ್ಯತೆ ನೀಡುವ ಪರಿಪಾಠ ಇವು ಮಹಿಳೆಯರಲ್ಲಿ ಪೋಷಕಾಂಶ ಕೊರತೆಗೆ ಮತ್ತು ರಕ್ತಹೀನತೆಗೆ ಕಾರಣವಾಗುತ್ತವೆ ಎಂದು ಫೋರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಹಿರಿಯ ತಜ್ಞವೈದ್ಯೆ ಡಾ.ಇಂದು ತನೇಜಾ ತಿಳಿಸಿದರು.

ಆದರೆ ರಕ್ತಹೀನತೆ ಜಾಗತಿಕ ಸಮಸ್ಯೆಯಾಗಿದೆ, ಶ್ರೀಮಂತ ರಾಷ್ಟ್ರಗಳಲ್ಲಿಯೂ ಹಲವಾರು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದೂ ವರದಿಯು ಬೆಟ್ಟು ಮಾಡಿದೆ. ಫ್ರಾನ್ಸ್ ಮತ್ತು ಸ್ವಿಟ್ಝರ್‌ಲ್ಯಾಂಡ್‌ನಂತಹ ರಾಷ್ಟ್ರಗಳಲ್ಲಿ ಇಂತಹವರ ಸಂಖ್ಯೆ ಸುಮಾರು ಶೇ.18ರಷ್ಟಿದೆ ಎಂದು ಅದು ಹೇಳಿದೆ. ವಿಶ್ವಾದ್ಯಂತ 15-49 ವರ್ಷ ವಯೋಗುಂಪಿನ 614 ಮಿಲಿಯನ್ ಮಹಿಳೆಯರು ರಕ್ತಹೀನತೆಯಿಂದ ಬಾಧಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News