ಸಮುದ್ರದಲ್ಲಿ ಪತ್ತೆಯಾಯ್ತು 26 ಬಾಲಕಿಯರ ಶವ!

Update: 2017-11-07 15:59 GMT

ರೋಮ್ (ಇಟಲಿ), ನ. 7: ಮೆಡಿಟರೇನಿಯನ್ ಸಮುದ್ರದಲ್ಲಿ 26 ಹದಿಹರಯದ ಬಾಲಕಿಯರ ಮೃತದೇಹಗಳು ಪತ್ತೆಯಾಗಿದ್ದು, ಅವರ ಸಾವಿನ ಕಾರಣದ ಬಗ್ಗೆ ಇಟಲಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

14ರಿಂದ 18 ವರ್ಷದ ನಡುವಿನ ಬಾಲಕಿಯರು ನೈಜರ್ ಮತ್ತು ನೈಜೀರಿಯದ ವಲಸಿಗರಾಗಿರಬೇಕೆಂದು ಭಾವಿಸಲಾಗಿದೆ. ಅವರು ಕಳೆದ ವಾರಾಂತ್ಯದಲ್ಲಿ ಲಿಬಿಯದಿಂದ ಯುರೋಪ್‌ಗೆ ಈ ಅಪಾಯಕಾರಿ ಸಮುದ್ರ ಮಾರ್ಗದಲ್ಲಿ ಪ್ರಯಾಣ ಕೈಗೊಂಡಿರಬೇಕೆಂದು ಹೇಳಲಾಗಿದೆ.

ಬಾಲಕಿಯರ ಶವಪರೀಕ್ಷೆಗಳನ್ನು ಮಂಗಳವಾರ ನಡೆಸಲಾಗುವುದು ಹಾಗೂ ಅವರಿಗೆ ಹಿಂಸೆ ನೀಡಲಾಗಿದೆಯೇ ಅಥವಾ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆಯೇ ಎಂಬ ಬಗ್ಗೆ ಕೋರೊನರ್‌ಗಳು ತನಿಖೆ ನಡೆಸಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ರಾತ್ರಿ ತಿಳಿಸಿದರು.

ಸಣ್ಣ ರಬ್ಬರ್ ದೋಣಿಯೊಂದರ ಸಮೀಪದಲ್ಲಿ ಈ ಬಾಲಕಿಯರ ಶವಗಳು ಪತ್ತೆಯಾಗಿವೆ. ರಕ್ಷಣಾ ತಂಡಗಳು ಬಂದಾಗ ದೋಣಿಯು ಹೆಚ್ಚು ಕಡಿಮೆ ಸಂಪೂರ್ಣವಾಗಿ ಮುಳುಗಿತ್ತು.

ಅದೇ ವೇಳೆ, ಕಳೆದ ವಾರಾಂತ್ಯದಲ್ಲಿ ಇತರ ಮೂರು ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಟ್ಟು 400 ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ 90 ಮಂದಿ ಮಹಿಳೆಯರು ಮತ್ತು 52 ಅಪ್ರಾಪ್ತ ವಯಸ್ಕರು.

ಹೊಸ ಜೀವನ ಅರಸುತ್ತಾ 2,839 ಮಂದಿ ಸಮುದ್ರದಲ್ಲಿ ಮುಳುಗಿದರು

ಈ ವರ್ಷ ಮೆಡಿಟರೇನಿಯನ್ ಸಮುದ್ರವನ್ನು ದಾಟಿ ಯುರೋಪ್‌ಗೆ ಸೇರುವ ಹಾಗೂ ಆ ಮೂಲಕ ಹೊಸಜೀವನವನ್ನು ಆರಂಭಿಸುವ ತವಕದಲ್ಲಿ 2,839 ವಲಸಿಗರು ಸಮುದ್ರದಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.

ಒಟ್ಟು 1,50,982 ವಲಸಿಗರು ಸುರಕ್ಷಿತವಾಗಿ ಯುರೋಪ್ ತೀರಗಳನ್ನು ಸೇರಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸಿಗರ ಸಂಘಟನೆ ತಿಳಿಸಿದೆ. ಈ ಪೈಕಿ 74 ಶೇಕಡ ಮಂದಿ ಇಟಲಿಯಲ್ಲಿ ತಳವೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News