×
Ad

ನೋಟ್‌ಬ್ಯಾನ್, ಜಿಎಸ್‌ಟಿ ಅಭಿವೃದ್ಧಿಗೆ ಅನಿವಾರ್ಯವಾಗಿತ್ತು: ಜೇಟ್ಲಿ ಸಮರ್ಥನೆ

Update: 2017-11-07 21:48 IST

ಹೊಸದಿಲ್ಲಿ, ನ.7: ದೇಶದ ಆರ್ಥಿಕ ಸುಧಾರಣೆಗೆ ನೋಟ್‌ಬ್ಯಾನ್ ಮತ್ತು ಜಿಎಸ್‌ಟಿ ಅನಿವಾರ್ಯವಾಗಿತ್ತು. ಸದ್ಯ ಈ ಸುಧಾರಣಾ ಕ್ರಮಗಳ ಪ್ರತಿಫಲ ನಮ್ಮ ಜೊತೆಗಿದ್ದು ಆರ್ಥಿಕ ಸೂಚ್ಯಂಕವು ಅಭಿವೃದ್ಧಿಯತ್ತ ಮುಖಮಾಡಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದರು. ನೋಟು ಅಮಾನ್ಯೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆ ಮುಂತಾದ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿರುವುದರಿಂದ ಆರಂಭದಲ್ಲಿ ಕಷ್ಟಗಳನ್ನು ಎದುರಿಸಬೇಕಾಗಬಹುದು ಆದರೆ ಆರ್ಥಿಕತೆಯ ಮೇಲೆ ಅದರ ದೀರ್ಘಕಾಲೀನ ಪರಿಣಾಮ ಉತ್ತಮವಾಗಲಿದೆ ಎಂದು ಇಂಡಿಯಾ ಟುಡೆ ಕಾಂಕ್ಲೇವ್‌ನಲ್ಲಿ ಮಾತನಾಡುವ ವೇಳೆ ಜೇಟ್ಲಿ ನುಡಿದರು.

ಕಳೆದ ಎರಡು ಮೂರು ತಿಂಗಳ ಖರೀದಿ ವ್ಯವಸ್ಥಾಪನ ಸೂಚ್ಯಂಕವು ಕೈಗಾರಿಕಾ ಉತ್ಪನ್ನ ಮತ್ತು ಮೂಲ ಕ್ಷೇತ್ರಾಭಿವೃದ್ಧಿ ಮಾದರಿಯಲ್ಲೇ ಗುಣಾತ್ಮಕವಾಗಿದೆ ಎಂದು ತಿಳಿಸಿದ ಜೇಟ್ಲಿ ಇವುಗಳು ಕೆಲವು ಪ್ರಾಥಮಿಕ ಸೂಚನೆಗಳಾಗಿದ್ದು ಪರಿಸ್ಥಿತಿಯು ಅಭಿವೃದ್ಧಿಯತ್ತ ಮುಖ ಮಾಡಿರುವುದನ್ನು ಎಂಬುದನ್ನು ಬೊಟ್ಟು ಮಾಡುತ್ತದೆ ಎಂದು ಹೇಳಿದರು.

ನಾವು ಮಹತ್ವದ ಎರಡು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದೆವು. ಅವುಗಳ ಪರಿಣಾಮ ನಮ್ಮ ಮುಂದಿದೆ ಮತ್ತು ಲಾಭ ನಮ್ಮ ಜೊತೆಗಿದೆ. ಹಾಗಾಗಿ ದೇಶದ ಭವಿಷ್ಯವು ಉತ್ತಮವಾಗಿರುವು ಎಂಬುದನ್ನು ಸದ್ಯದ ಪರಿಸ್ಥಿತಿ ಸೂಚಿಸುತ್ತದೆ ಎಂದು ಸಚಿವರು ವಿವರಿಸಿದರು.

ಭ್ರಷ್ಟಾಚಾರ, ಕಪ್ಪುಹಣ, ಭಯೋತ್ಪಾದನೆ ಮತ್ತು ನಕಲಿ ನೋಟುಗಳ ಹಾವಳಿಯ ವಿರುದ್ಧ ಹೋರಾಡಲು ಕಳೆದ ವರ್ಷ ನವೆಂಬರ್ 8ರಂದು ಪ್ರಧಾನಿ ಮೋದಿ ರೂ. 500 ಮತ್ತು ರೂ. 1000ದ ನೋಟುಗಳನ್ನು ಅಮಾನ್ಯಗೊಳಿಸಿ ಆದೇಶ ಹೊರಡಿಸಿದ್ದರು.

ನೋಟು ರದ್ದತಿಯು ದೇಶದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬಿದ್ದಿದೆ ಎಂಬ ಆರೋಪದ ಬಗ್ಗೆ ಮಾತನಾಡಿದ ಜೇಟ್ಲಿ , ಇಂಥಾ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಧೈರ್ಯ ಇಲ್ಲದೇ ಹೋದರೆ ದೇಶದಲ್ಲಿ ಹಿಂದಿನ ಪರಿಸ್ಥಿತಿ ಹಾಗೆಯೇ ಮುಂದುವರಿಯುತ್ತಿತ್ತು ಎಂದು ಹೇಳಿದರು.

 ಭಾರತವು ಕಳೆದ ಮೂರು ವರ್ಷಗಳಿಂದ ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕಶಕ್ತಿಯಾಗಿದ್ದು ಇಂಥಾ ಸುಧಾರಣಾ ಕ್ರಮವನ್ನು ಕೈಗೊಳ್ಳಲು ಸಕಾಲವಾಗಿತ್ತು ಎಂದು ತಿಳಿಸಿದ ವಿತ್ತ ಸಚಿವರು, ಇಲ್ಲವಾದಲ್ಲಿ ಹಿಂದಿನ ಸರಕಾರಗಳು ಸುಧಾರಣಾ ಕ್ರಮಗಳ ಹೆಸರಲ್ಲಿ ನೀಡುತ್ತಿದ್ದುದು ಕೇವಲ ಯೋಜನಾ ವೈಫಲ್ಯಗಳನ್ನು ಎಂದು ಜೇಟ್ಲಿ ವ್ಯಂಗ್ಯವಾಡಿದರು.

 ನೋಟು ಅಮಾನ್ಯೀಕರಣವು ಚಲಾವಣೆಯಲ್ಲಿದ್ದ ಕರೆನ್ಸಿಯ ಶೇಕಡಾ 86ನ್ನು ನುಂಗಿ ಹಾಕಿದ ಪರಿಣಾಮ ನಗದನ್ನೇ ಅವಲಂಬಿಸಿದ್ದ ವ್ಯವಹಾರಗಳು ಮರ್ಮಾಘಾತ ಎದುರಿಸಿದವು ಮತ್ತು ಜುಲೈ ಒಂದರಂದು ಜಾರಿಗೆ ಬಂದ ಜಿಎಸ್‌ಟಿಯಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಆಘಾತ ಎದುರಿಸುವ ಮೂಲಕ ಪ್ರಸಕ್ತ ವಿತ್ತ ವರ್ಷದ ಎಪ್ರಿಲ್-ಜೂನ್ ಸಮಯದಲ್ಲಿ ಆರ್ಥಿಕ ಬೆಳವಣಿಗೆ ಶೇಕಡಾ 5.7ರಷ್ಟು ಕುಸಿತ ಕಂಡಿತು. ಇದು 2014ರಿಂದೀಚೆಗೆ ದಾಖಲಾದ ಅತ್ಯಂತ ಕನಿಷ್ಟ ಬೆಳವಣಿಗೆಯಾಗಿದೆ.

ಇದಕ್ಕೆ ಸಮಜಾಯಿಷಿ ನೀಡಿದ ಜೇಟ್ಲಿ, ಜಿಡಿಪಿಯು ನೋಟು ಅಮಾನ್ಯಕ್ಕಿಂತಲೂ ಮೊದಲೇ ಕುಸಿಯಲು ಆರಂಭಿಸಿತ್ತು. ಜುಲೈ ಒಂದರಿಂದ ಜಿಎಸ್‌ಟಿ ಜಾರಿಯಾಗಲಿದೆ ಎಂಬ ಸೂಚನೆ ಪಡೆದ ಕೈಗಾರಿಕಾ ಸಂಸ್ಥೆಗಳು ತಮ್ಮಲ್ಲಿನ ಉತ್ಪನ್ನಗಳ ಸಂಗ್ರಹವನ್ನು ಕಡಿಮೆ ಮಾಡುತ್ತಿದ್ದ ಕಾರಣ ಉತ್ಪನ್ನ ಸ್ವಾಭಾವಿಕವಾಗಿಯೇ ಕುಸಿತ ಕಂಡಿತು ಎಂದು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News