×
Ad

ನ್ಯಾಶನಲ್ ಬ್ಯಾಡ್ಮಿಂಟನ್: ಶ್ರೀಕಾಂತ್-ಪ್ರಣಯ್ ಫೈನಲ್ ಹಣಾಹಣಿ

Update: 2017-11-07 23:51 IST

ನಾಗ್ಪುರ, ನ.7: ವಿಶ್ವದ ನಂ.2ನೆ ಆಟಗಾರ ಕಿಡಂಬಿ ಶ್ರೀಕಾಂತ್ ಹಾಗೂ ‘ದೈತ್ಯ ಸಂಹಾರಿ’ ಖ್ಯಾತಿಯ ಎಚ್.ಎಸ್.ಪ್ರಣಯ್ 82ನೆ ಆವೃತ್ತಿಯ ನ್ಯಾಶನಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್‌ಗೆ ತಲುಪಿದ್ದಾರೆ.

ಮಂಗಳವಾರ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಪ್ರಣಯ್ ಅವರು ಶುಭಾಂಕರ್ ಡೇ ಅವರನ್ನು 21-14, 21-17 ಗೇಮ್‌ಗಳ ಅಂತರದಿಂದ ಮಣಿಸಿದರು.

 ಅಗ್ರ ಶ್ರೇಯಾಂಕದ ಶ್ರೀಕಾಂತ್ 16 ರ ಹರೆಯದ ಉದಯೋನ್ಮುಖ ಶಟ್ಲರ್ ಲಕ್ಷ ಸೇನ್ ವಿರುದ್ಧ 21-16, 21-18 ಅಂತರದಿಂದ ಜಯ ಸಾಧಿಸಿದ್ದಾರೆ.

ಶ್ರೀಕಾಂತ್ ಹಾಗೂ ಪ್ರಣಯ್ ಸೆಮಿಫೈನಲ್‌ಗೆ ತಲುಪುವ ಮೂಲಕ ಫ್ರೆಂಚ್ ಓಪನ್ ಪಂದ್ಯದ ಪುನರಾವರ್ತನೆಯಾಗಿದೆ. ಕಳೆದ ವಾರ ನಡೆದಿದ್ದ ಫ್ರೆಂಚ್ ಓಪನ್‌ನಲ್ಲಿ ಈ ಇಬ್ಬರು ಆಟಗಾರರು ಮುಖಾಮುಖಿಯಾಗಿದ್ದರು.

ಶ್ರೀಕಾಂತ್ ಹಾಗೂ ಪ್ರಣಯ್ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ನಾಲ್ಕು ಬಾರಿ ಮುಖಾಮುಖಿಯಾಗಿದ್ದಾರೆ. ಮೂರು ಬಾರಿ ಶ್ರೀಕಾಂತ್ ಜಯ ಸಾಧಿಸಿದ್ದರು. 2011ರ ಟಾಟಾ ಓಪನ್‌ನಲ್ಲಿ ಮಾತ್ರ ಪ್ರಣಯ್ ಅವರು ಶ್ರೀಕಾಂತ್‌ಗೆ ಸೋಲುಣಿಸಿದ್ದರು.

     ಶ್ರೀಕಾಂತ್ ಈವರ್ಷ ನಾಲ್ಕು ಸೂಪರ್ ಸರಣಿ ಪ್ರಶಸ್ತಿಗಳನ್ನು ಜಯಿಸುವ ಮೂಲಕ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಪ್ರಣಯ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದು, ಇಂಡೋನೇಷ್ಯಾ ಸೂಪರ್ ಸರಣಿ ಹಾಗೂ ಫ್ರೆಂಚ್ ಓಪನ್ ಸೂಪರ್ ಸರಣಿಯಲ್ಲಿ ಸೆಮಿ ಫೈನಲ್‌ಗೆ ತಲುಪುವ ಮೂಲಕ ವಿಶ್ವ ರ್ಯಾಂಕಿಂಗ್‌ನಲ್ಲಿ 11ನೆ ಸ್ಥಾನಕ್ಕೇರಿದ್ದರು. ಈ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದ್ದರು. ಪ್ರಣಯ್ ಈ ವರ್ಷ ಲೀ ಚೊಂಗ್ ವೀ ಅವರನ್ನು 2 ಬಾರಿ, ಚೆಲ್‌ರನ್ನು ಒಂದು ಬಾರಿಸಿ ಸೋಲಿಸಿದ್ದರು. ಮಿಶ್ರ ಡಬಲ್ಸ್ ಜೋಡಿಗಳಾದ ಸಾತ್ವಿಕ್ ಸಾಯಿ ರಾಜ್ ಹಾಗೂ ಅಶ್ವಿನಿ ಪೊನ್ನಪ್ಪ ಅಗ್ರ ಶ್ರೇಯಾಂಕದ ಪ್ರಣವ್ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ ಅವರನ್ನು ಫೈನಲ್‌ನಲ್ಲಿ ಎದುರಿಸಲಿದ್ದಾರೆ. ಮೊದಲ ಸೆಮಿಫೈನಲ್‌ನಲ್ಲಿ ಸಾತ್ವಿಕ್‌ರಾಜ್- ಅಶ್ವಿನಿ ಪೊನ್ನಪ್ಪ ವಿರುದ್ಧ ಸನ್ಯಾಂ ಶುಕ್ಲಾ-ಸಾನ್ಯೊಗಿತಾ ಘೋರ್ಪಡೆ ಮೊದಲ ಗೇಮ್‌ನಲ್ಲಿ ಗಾಯಗೊಂಡು ಹಿಂದೆ ಸರಿದರು. ಈ ಹಿನ್ನೆಲೆಯಲ್ಲಿ ಸಾತ್ವಿಕ್‌ರಾಜ್-ಅಶ್ವಿನಿ ಫೈನಲ್‌ಗೆ ತಲುಪಿದ್ದಾರೆ.

ಒಂದು ಗಂಟೆ ಕಾಲ ನಡೆದ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪ್ರಣವ್ ಹಾಗೂ ಸಿಕ್ಕಿ ಜೋಡಿ ಅಶ್ವಿನ್ ಫ್ರಾನ್ಸಿಸ್ ಹಾಗೂ ಅಪರ್ಣಾ ಬಾಲನ್‌ರನ್ನು 21-16, 22-24, 21-8 ಗೇಮ್‌ಗಳ ಅಂತರದಿಂದ ಮಣಿಸಿ ಪ್ರಶಸ್ತಿ ಸುತ್ತಿಗೆ ತಲುಪಿದ್ದಾರೆ.

ಮಹಿಳೆಯರ ಡಬಲ್ಸ್‌ನಲ್ಲಿ ಸಿಕ್ಕಿ ರೆಡ್ಡಿ ಹಾಗೂ ಅಶ್ವಿನಿ ಪೊನ್ನಪ್ಪ ಫೈನಲ್‌ಗೆ ತಲುಪಿದ್ದು, ಸನ್ಯೊಗಿತಾ ಘೋಪರ್ಡೆ ಹಾಗೂ ಪ್ರಜಕ್ತಾ ಸಾವಂತ್‌ರನ್ನು ಎದುರಿಸಲಿದ್ದಾರೆ.

ಅಗ್ರ ಶ್ರೇಯಾಂಕದ ಸಿಕ್ಕಿ ರೆಡ್ಡಿ-ಅಶ್ವಿನಿ ಜೋಡಿ ಅಪರ್ಣಾ ಬಾಲನ್ ಹಾಗೂ ಶುೃತಿ ಅವರನ್ನು 21-10, 21-14 ಅಂತರದಿಂದ ಮಣಿಸಿದರೆ, ಮತ್ತೊಂದು ಸೆಮಿಫೈನಲ್‌ನಲ್ಲಿ ಸನ್ಯೊಗಿತಾ ಹಾಗೂ ಪ್ರಜಕ್ತಾ ಜೋಡಿ ರುತುಪರ್ಣ ಪಾಂಡ ಹಾಗೂ ಮಿಥುಲಾರನ್ನು 18-21, 21-12, 21-16 ಸೆಟ್‌ಗಳಿಂದ ಸೋಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News