ಶರೀಫ್ ವಿರುದ್ಧದ 3 ಪ್ರಕರಣಗಳನ್ನು ಒಗ್ಗೂಡಿಸಲು ನಿರಾಕರಿಸಿದ ನ್ಯಾಯಾಲಯ

Update: 2017-11-08 16:21 GMT

ಇಸ್ಲಾಮಾಬಾದ್, ನ. 8: ಪನಾಮ ದಾಖಲೆ ಸೋರಿಕೆಗಳ ಆಧಾರದಲ್ಲಿ ತನ್ನ ವಿರುದ್ಧ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ದಾಖಲಿಸಿರುವ ಮೂರು ಭ್ರಷ್ಟಾಚಾರ ಪ್ರಕರಣಗಳನ್ನು ಒಂದಾಗಿ ವಿಚಾರಣೆ ನಡೆಸಬೇಕು ಎಂಬ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಝ್ ಶರೀಫ್‌ರ ಮನವಿಯನ್ನು ದೇಶದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.

ಈ ತೀರ್ಪಿನ ಬಳಿಕ, ಈ ಮೂರೂ ಪ್ರಕರಣಗಳಲ್ಲಿ ಶರೀಫ್ ವಿರುದ್ಧ ಪ್ರತ್ಯೇಕವಾಗಿ ದೋಷಾರೋಪಣೆ ಹೊರಿಸಲಾಯಿತು.

ಈ ಹಿನ್ನೆಲೆಯಲ್ಲಿ, 67 ವರ್ಷದ ಶರೀಫ್ ಇನ್ನು ಈ ಮೂರು ಪ್ರಕರಣಗಳಲ್ಲಿ ಪ್ರತ್ಯೇಕವಾಗಿ ವಿಚಾರಣೆಗಳನ್ನು ಎದುರಿಸಬೇಕಾಗಿದೆ.

ಈ ಮೂರೂ ಪ್ರಕರಣಗಳಲ್ಲಿ ತಾನು ಅಪರಾಧಿಯಲ್ಲ ಎಂಬುದಾಗಿ ಮಾಜಿ ಪ್ರಧಾನಿ ನ್ಯಾಯಾಲಯದಲ್ಲಿ ಭಿನ್ನವಿಸಿದರು. ಸುಪ್ರೀಂ ಕೋರ್ಟ್‌ನ ಆದೇಶದಂತೆ ಪ್ರಕರಣಗಳ ವಿಚಾರಣೆಯನ್ನು ಆರು ತಿಂಗಳಲ್ಲಿ ಮುಗಿಸಲು ನ್ಯಾಯಾಲಯವು ದಾಪುಗಾಲಿಟ್ಟಿದ್ದು, ತನ್ನ ವಿಚಾರಣೆ ನ್ಯಾಯೋಚಿತವಾಗಿ ನಡೆಯುತ್ತಿಲ್ಲ ಎಂದರು.

ಆದರೆ, ಈ ಆರೋಪವನ್ನು ನಿರಾಕರಿಸಿದ ಅಕೌಂಟಬಿಲಿಟಿ ನ್ಯಾಯಾಲಯದ ನ್ಯಾಯಾಧೀಶ ಮುಹಮ್ಮದ್ ಬಶೀರ್, ಕಾನೂನು ಪ್ರಕಾರ ಶರೀಫ್‌ರ ವಿಚಾರಣೆಯನ್ನು ನ್ಯಾಯೋಚಿತವಾಗಿ ನಡೆಸಲಾಗುವುದು ಎಂದು ಹೇಳಿದರು.

ಬಳಿಕ, ನ್ಯಾಯಾಧೀಶರು ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News