ವರ್ಜೀನಿಯ, ನ್ಯೂಜರ್ಸಿಗಳಿಗೆ ಡೆಮಾಕ್ರಟಿಕ್ ಗವರ್ನರ್‌ಗಳ ಆಯ್ಕೆ: ಟ್ರಂಪ್‌ಗೆ ಭಾರೀ ಹಿನ್ನಡೆ
ವಾಶಿಂಗ್ಟನ್, ನ. 8: ಅಮೆರಿಕದ ವರ್ಜೀನಿಯ ರಾಜ್ಯದ ಗವರ್ನರ್ ಹಾಗೂ ಎಲ್ಲ ಪ್ರಮುಖ ಹುದ್ದೆಗಳನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಅವರ ನೀತಿಗಳು, ಅದರಲ್ಲೂ ಮುಖ್ಯವಾಗಿ ಅವರ ವಿಭಜನವಾದಿ ರಾಜಕೀಯಕ್ಕೆ ಪರೀಕ್ಷೆ ಎನ್ನಲಾದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಟ್ರಂಪ್ ಭಾರೀ ಮುಖಭಂಗ ಅನುಭವಿಸಿದ್ದಾರೆ.
ವೈದ್ಯ ಹಾಗೂ ಕೊಲ್ಲಿ ಯುದ್ಧದಲ್ಲಿ ಭಾಗವಹಿಸಿದ ಸೈನಿಕನಾಗಿರುವ ಡೆಮಾಕ್ರಟಿಕ್ ಪಕ್ಷದ ರಾಲ್ಫ್ ನಾರ್ತಮ್ ತನ್ನ ರಿಪಬ್ಲಿಕನ್ ಪ್ರತಿಸ್ಪರ್ಧಿ ಎಡ್ ಗಿಲೆಸ್ಪಿಯನ್ನು ಸುಲಭವಾಗಿ ಸೋಲಿಸಿ ವರ್ಜೀನಿಯದ ಗವರ್ನರ್ ಆಗಿ ಆಯ್ಕೆಯಾದರು.
ರಿಪಬ್ಲಿಕನ್ ಅಭ್ಯರ್ಥಿ ಚುನಾವಣಾ ಪ್ರಚಾರದಲ್ಲಿ ಟ್ರಂಪ್ ತಂತ್ರಗಳನ್ನೇ ಅನುಸರಿಸಿದರು. ಅಕ್ರಮ ವಲಸಿಗರ ವಿರುದ್ಧ ಹರಿಹಾಯ್ದ ಅವರು, ಪಾಳೇಗಾರಿಕೆ (ಕನ್ಫೆಡರೇಟ್) ಕಾಲದ ಸ್ಮಾರಕಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು.
ಅದೇ ವೇಳೆ, ನ್ಯೂಜರ್ಸಿಯ ಗವರ್ನರ್ ಹುದ್ದೆಯೂ ಡೆಮಾಕ್ರಟಿಕರ ಪಾಲಾಗಿದೆ. ಈ ಹುದ್ದೆಯನ್ನು ಫಿಲ್ ಮರ್ಫಿ ರಿಪಬ್ಲಿಕನ್ ಕ್ರಿಸ್ ಕ್ರಿಸ್ಟೀ ಕೈಯಿಂದ ವಶಪಡಿಸಿಕೊಂಡಿದ್ದಾರೆ.