×
Ad

ನೋಟು ಬ್ಯಾನ್ ಹಿಂದಿನ ಉದ್ದೇಶ ತಿಳಿಯಲು ಸಂಸದೀಯ ತನಿಖೆ ನಡೆಯಲಿ

Update: 2017-11-08 22:55 IST

ಮುಂಬೈ, ನ.8: ನೋಟು ಅಮಾನ್ಯೀಕರಣದ ಹಿಂದಿರುವ ಕೇಂದ್ರ ಸರಕಾರದ ನೈಜ ಉದ್ದೇಶವನ್ನು ತಿಳಿಯಲು ಸಂಸದೀಯ ಸಮಿತಿ ಮೂಲಕ ಜಂಟಿ ತನಿಖೆಯನ್ನು ನಡೆಸಬೇಕು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಆಗ್ರಹಿಸಿದ್ದಾರೆ. ಪ್ರಧಾನ ಮಂತ್ರಿಗಳ ನೋಟು ನಿಷಿದ್ಧದ ಹಿಂದಿನ ನೈಜ ಉದ್ದೇಶ ಡಿಜಿಟಲೀಕರಣವೇ ಆಗಿತ್ತೇ ಎಂಬುದು ಸ್ಪಷ್ಟವಾಗಬೇಕು ಎಂದು ಚೌಹಾಣ್ ತಿಳಿಸಿದರು.

ಇದೊಂದು ಭಾವಾತಿರೇಕದ ನಿರ್ಧಾರ ಎಂದು ಹೇಳಿರುವ ಚೌಹಾಣ್, ಸಮಯ ಕಳೆಯುತ್ತಿದ್ದಂತೆ ಕಪ್ಪುಹಣದ ನಿರ್ಮೂಲನೆಯ ಬದಲಾಗಿ ಬೇರೆಯದ್ದೇ ಚಿತ್ರಣಗಳು ಹೊರಬರಲು ಆರಂಭಿಸಿದವು ಎಂದು ವಿವರಿಸಿದರು.

ಎಲ್ಲಾ ನಿಷೇಧಿತ ಹಣವು ವ್ಯವಸ್ಥೆಗೆ ಮರಳಿದೆ ಎಂದು ಆರ್‌ಬಿಐ ತಿಳಿಸಿದ ನಂತರ ನೋಟು ಅಮಾನ್ಯದ ಹಿಂದಿದ್ದ ಉದ್ದೇಶ ಡಿಜಿಟಲೀಕರಣ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದರು. ಇಲ್ಲಿ ಏಳುವ ಪ್ರಶ್ನೆಯೆಂದರೆ ಪ್ರಧಾನಿಗೆ ಇದರ ಹಿಂದಿನ ನೈಜ ಉದ್ದೇಶ ಬಗ್ಗೆ ಅರಿವಿತ್ತೇ ಅಥವಾ ಅವರನ್ನು ಕತ್ತಲಲ್ಲಿಡಲಾಗಿತ್ತೇ ಎಂಬುದು ಎಂದವರು ನುಡಿದರು. ತಮ್ಮ ಬಜೆಟ್ ಭಾಷಣದಲ್ಲಿ ಈ ಬಗ್ಗೆ ಮಂಡಳಿಯನ್ನು ರಚಿಸುವುದಾಗಿ ಜೇಟ್ಲಿ ತಿಳಿಸಿದ್ದರು. ಆದರೆ ಇಲ್ಲಿಯವರೆಗೂ ಈ ಬಗ್ಗೆ ಏನನ್ನೂ ಮಾಡಲಾಗಿಲ್ಲ. ಸರಿಯಾದ ಸೌಲಭ್ಯಗಳ ಹೊರತಾಗಿ ಜನರನ್ನು ನಗದುರಹಿತ ವ್ಯವಹಾರ ನಡೆಸಲು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಚೌಹಾಣ್ ತಿಳಿಸಿದರು.

ನೋಟು ನಿಷೇಧಗೊಂಡು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಪ್ರತಿಪಕ್ಷಗಳಿಂದ ತೀವ್ರ ಟೀಕೆಯನ್ನು ಎದುರಿಸುತ್ತಿದೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೋಟು ರದ್ದತಿಯನ್ನು ಒಂದು ದುರಂತ ಎಂದು ಕರೆದರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅದೊಂದು ದೊಡ್ಡ ಹಗರಣ ಎಂದು ವ್ಯಾಖ್ಯಾನಿಸಿದ್ದಾರೆ. ನಿಷೇಧಿತ ಕಪ್ಪುಹಣವು ಗುಜರಾತ್ ಚುನಾವಣೆಯಲ್ಲಿ ಬಳಕೆಗೆ ಬರಲಿದೆ ಎಂದು ಪಿ ಚಿದಂಬರಂ ಆರೋಪ ಮಾಡಿದ್ದಾರೆ.

ಕೇಂದ್ರ ಸರಕಾರ ನವೆಂಬರ್ 8ನ್ನು ಕಪ್ಪುಹಣ ವಿರೋಧಿ ದಿನವೆಂದು ಆಚರಿಸುತ್ತಿದ್ದರೆ ವಿಪಕ್ಷಗಳು ಭಾರತೀಯ ಇತಿಹಾಸದಲ್ಲೇ ಅದೊಂದು ಕರಾಳದಿನವೆಂದು ಪ್ರತಿಭಟನೆ ನಡೆಸುತ್ತಿವೆ.

ಕಳೆದ ವರ್ಷ ನವೆಂಬರ್ 8ರಂದು ಪ್ರಧಾನಿ ಮೋದಿ ರೂ.500 ಮತ್ತು ರೂ.1000ದ ನೋಟುಗಳನ್ನು ನಿಷೇಧಿಸಿ ಅನಿರೀಕ್ಷಿತ ಆದೇಶವನ್ನು ಹೊರಡಿಸಿದರು. ಅವರ ಈ ನಡೆಯಿಂದ ಜನರು ತಮ್ಮದೇ ಹಣವನ್ನು ಪಡೆಯಲು ಬ್ಯಾಂಕ್‌ಗಳ ಮತ್ತು ಎಟಿಎಂಗಳ ಮುಂದೆ ಹಣ ಪಡೆಯಲು ಮತ್ತು ಪಾವತಿಸಲು ಪರದಾಡುವಂಥಾ ಪರಿಸ್ಥಿತಿ ಉದ್ಭವವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News