ಸಚಿನ್- ದ್ರಾವಿಡ್ 331 ರನ್ ಗಳ ದಾಖಲೆ ಜೊತೆಯಾಟಕ್ಕೆ 16 ವರ್ಷ

Update: 2017-11-08 18:21 GMT

ಹೈದರಾಬಾದ್, ನ.8: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಮತ್ತು ಮಾಜಿ ನಾಯಕ ರಾಹುಲ್ ದ್ರಾವಿಡ್ ನ್ಯೂಝಿಲೆಂಡ್ ವಿರುದ್ಧದ ಎರಡನೆ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ದಾಖಲಿಸಿದ 331 ರನ್‌ಗಳ ಜೊತೆಯಾಟದ ದಾಖಲೆಗೆ 16 ವರ್ಷ ಸಂದಿದೆ. ಇಲ್ಲಿನ ಲಾಲ್‌ಬಹಾದೂರ್ ಶಾಸ್ತ್ರಿ ಸ್ಟೇಡಿಯಂನಲ್ಲಿ ನ.9, 1999ರಂದು ಸಚಿನ್ ಮತ್ತು ರಾಹುಲ್ ದ್ರಾವಿಡ್ ಎರಡನೆ ವಿಕೆಟ್‌ಗೆ 46.2 ಓವರ್‌ಗಳಲ್ಲಿ 331 ರನ್‌ಗಳ ಜೊತೆಯಾಟ ನೀಡಿ ತಂಡದ ಸ್ಕೋರ್‌ನ್ನು ನಿಗದಿತ 50 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 376 ರನ್‌ಗೆ ತಲುಪಿಸಲು ನೆರವಾಗಿದ್ದರು. ಭಾರತ ಈ ಪಂದ್ಯದಲ್ಲಿ ನ್ಯೂಝಿಲೆಂಡ್ ವಿರುದ್ಧ 174 ರನ್‌ಗಳ ಭರ್ಜರಿ ಜಯ ಗಳಿಸಿತ್ತು. ಐದು ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಲು ನೆರವಾಗಿತ್ತು. ನ್ಯೂಝಿಲೆಂಡ್ ಮೊದಲ ಪಂದ್ಯದಲ್ಲಿ ಜಯ ಗಳಿಸಿತ್ತು.

 ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ನಾಯಕ ಸಚಿನ್ ತೆಂಡುಲ್ಕರ್ ಅವರು ಸೌರವ್ ಗಂಗುಲಿ ಜೊತೆ ಇನಿಂಗ್ಸ್ ಆರಂಭಿಸಿದ್ದರು. ಆದರೆ ಗಂಗುಲಿ (4)ತಂಡದ ಸ್ಕೋರ್ 1.4 ಓವರ್‌ಗಳಲ್ಲಿ 10ಕ್ಕೆ ತಲುಪುವಾಗ ರನೌಟಾಗಿ ಪೆವಿಲಿಯನ್ ಸೇರಿದ್ದರು. ಎರಡನೆ ವಿಕೆಟ್‌ಗೆ ಸಚಿನ್‌ಗೆ ಮಹಾನ್ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಜೊತೆಯಾಗಿದ್ದರು. ಇವರು 48 ಓವರ್‌ಗಳ ಮುಕ್ತಾಯದ ತನಕ ಕ್ರೀಸ್‌ಗೆ ಅಂಟಿಕೊಂಡು ಬ್ಯಾಟ್ ನಡೆಸಿದ್ದರು. ದ್ರಾವಿಡ್ 196 ನಿಮಿಷಗಳಲ್ಲಿ 153 ಎಸೆತಗಳನ್ನು ಎದುರಿಸಿದ್ದರು. 15 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಲ್ಲಿ 153 ರನ್ ಗಳಿಸಿ ಕ್ರೈನ್ಸ್ ಎಸೆತದಲ್ಲಿ ಫ್ಲೆಮಿಂಗ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ಸಚಿನ್ ತೆಂಡುಲ್ಕರ್ ಇನಿಂಗ್ಸ್ ಪೂರ್ತಿ ಆಡಿದ್ದರು. ಔಟಾಗದೆ 221 ನಿಮಿಷಗಳ ಬ್ಯಾಟಿಂಗ್‌ನಲ್ಲಿ 150 ಎಸೆತಗಳನ್ನು ಎದುರಿಸಿದ್ದರು. 20 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ 186 ರನ್ ಗಳಿಸಿದ್ದರು.

ಮೂರನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ ಅಜಯ್ ಜಡೇಜ ಜೊತೆ 35 ರನ್‌ಗಳ ಜೊತೆಯಾಟ ನೀಡಿದ್ದರು. ಸಚಿನ್ ಗಳಿಸಿದ ಅಜೇಯ 186 ರನ್ 2010ರಲ್ಲಿ ಅವರು ದ್ವಿಶತಕ ದಾಖಲಿಸುವ ತನಕ ಏಕದಿನ ಕ್ರಿಕೆಟ್‌ನಲ್ಲಿ ದಾಖಲಿಸಿದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು. ಈ ಪಂದ್ಯದಲ್ಲಿ 377 ರನ್‌ಗಳ ಕಠಿಣ ಸವಾಲು ಪಡೆದ ನ್ಯೂಝಿಲೆಂಡ್ 33.1 ಓವರ್‌ಗಳಲ್ಲಿ 202 ರನ್‌ಗಳಿಗೆ ಆಲೌಟಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News