ಗುಜರಾತ್: 50-60 ಸ್ಥಾನಗಳಲ್ಲಿ ಶಿವಸೇನೆ ಸ್ಪರ್ಧೆ
Update: 2017-11-09 20:12 IST
ಮುಂಬೈ, ನ. 9: ಗುಜರಾತ್ ವಿಧಾನ ಸಭೆ ಚುನಾವಣೆಯಲ್ಲಿ ಶಿವಸೇನೆ 50ರಿಂದ 60 ಸ್ಥಾನಗಳಿಗೆ ಸ್ಪರ್ಧಿಸಲಿದೆ ಎಂದು ಪಕ್ಷದ ಹಿರಿಯ ವಕ್ತಾರರು ತಿಳಿಸಿದ್ದಾರೆ. ಗುಜರಾತ್‌ನಲ್ಲಿ ರಾಜಕೀಯ ವ್ಯೂಹಾತ್ಮಕತೆ ಹಾಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪಕ್ಷದ ಗುಜರಾತಿ ಘಟಕದ ಸಂಯೋಜಕ, ಓಶಿವಾರದ ಕಾರ್ಪೊರೇಟರ್ ರಾಹುಲ್ ಪಟೇಲ್ ಹಾಗೂ ನಾಯಕ ಹೇಮರಾಜ್ ಸಿನ್ಹಾ ನೇತೃತ್ವದ ಉನ್ನತ ಮಟ್ಟದ ಸಮಿತಿ ಅಭಿಯಾನ ನಡೆಸುತ್ತಿದೆ.
ಮುಖ್ಯವಾಗಿ ಸೂರತ್ ಹಾಗೂ ಅಹ್ಮದಾಬಾದ್ ನಡುವೆ ಹರಡಿರುವ ಕ್ಷೇತ್ರಗಳಲ್ಲಿ ನಾವು ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಆದಾಗ್ಯೂ ಶಿವಸೇನೆ ಯಾವುದೇ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಮ್ಮ ಅಧ್ಯಕ್ಷ ಉದ್ಧವ್ ಠಾಕ್ರೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.