ಬೆಳೆ ಸಮೀಕ್ಷೆಯಿಂದ ಇತರೆ ಯೋಜನೆಗೂ ಅನುಕೂಲ:ಉಡುಪಿ ಡಿಸಿ ಪ್ರಿಯಾಂಕ

Update: 2017-11-09 14:51 GMT

ಉಡುಪಿ, ನ.9: ರೈತರು ತಮ್ಮ ಜಮೀನಿನ ಬೆಳೆ ಸಮೀಕ್ಷೆಯನ್ನು ಆ್ಯಪ್ ಮೂಲಕ ದಾಖಲಿಸುವುದರಿಂದ ಬೆಳೆವಿಮೆ ಮಾತ್ರವಲ್ಲದೇ, ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳಿಂದ ದೊರಕುವ ವಿವಿಧ ಯೋಜನೆಗಳ ಪ್ರಯೋಜನವನ್ನು ಶೀಘ್ರವಾಗಿ ಪಡೆಯಲು ಬೆಳೆ ಸಮೀಕ್ಷೆಯಿಂದ ಸಂಗ್ರಹಿಸುವ ಮಾಹಿತಿಗಳು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನಿಸ್ ತಿಳಿಸಿದ್ದಾರೆ.

ಗುರುವಾರ ಮಣಿಪಾಲದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ರೈತ ಸಂಘಟನೆಗಳ ಮುಖಂಡರು, ಪ್ರಗತಿಪರ ರೈತರು, ವಿವಿಧ ಕಾಲೇಜುಗಳ ಉಪನ್ಯಾಸಕರಿಗೆ ಬೆಳೆ ಸಮೀಕ್ಷೆ ದಾಖಲಿಸುವ ಕುರಿತಂತೆ ನೂತನ ವಾಗಿ ಬಿಡುಗಡೆ ಮಾಡಿರುವ ಮೊಬೈಲ್ ಆ್ಯಪ್ ಉಪಯೋಗಿಸುವ ಕುರಿತು ತರಬೇತಿ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲೆಯ 267 ಗ್ರಾಮಗಳಲ್ಲಿ 9.91 ಲಕ್ಷ ಆರ್‌ಟಿಸಿಗಳಿದ್ದು, ಜಿಲ್ಲೆ ಯಲ್ಲಿರುವ ಗ್ರಾಮ ಲೆಕ್ಕಿಗರಿಗೆ ಪ್ರತಿಯೊಬ್ಬರಿಗೆ 3700 ಆರ್‌ಟಿಸಿಗಳನ್ನು ಸಮೀಕ್ಷೆಗೆ ಒಳಪಡಿಸುವ ಕಾರ್ಯ ನೀಡಲಾಗಿದೆ. ವಿವಿಧ ಕಾರಣಗಳಿಂದ ಜಿಲ್ಲೆಯಲ್ಲಿ ಸಮೀಕ್ಷೆ ಕಾರ್ಯ ವಿಳಂಬವಾಗಿದ್ದು, ಪ್ರಸ್ತುತ ರಾಜ್ಯ ಸರ್ಕಾರ ಬೆಳೆ ಸಮೀಕ್ಷೆ ದಾಖಲಿಸಲು, ರೈತರು ಮತ್ತು ಸಾರ್ವಜನಿಕರು ಸುಲಭದಲ್ಲಿ ಬಳಸಬಹುದಾದ ಆ್ಯಪ್‌ನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಬಳಸಿಕೊಂಡು ರೈತರೇ ತಮ್ಮ ಜಮೀನಿನ ಸಮೀಕ್ಷೆ ಕಾರ್ಯ ಕೈಗೊಳ್ಳಬಹುದು ಎಂದವರು ತಿಳಿಸಿದರು.

ಮೊಬೈಲ್‌ನಲ್ಲಿ ಅಂಡ್ರಾಯ್ಡಾ ಸೌಲ್ಯ ಹೊಂದಿರುವ ರೈತರು ಮೊಬೈಲ್‌ನ ಗೂಗಲ್ ಪ್ಲೇ ಸ್ಟೋರ್‌ನಿಂದ -FARMER’S CROP SURVEY -ಎಂದು ಚೆಕ್ ಮಾಡಿದಾಗ, ಅಲ್ಲಿ ಇರುವ ಬೆಳೆ ಸಮೀಕ್ಷೆ ಎಂಬ ಅಪ್ಲಿಕೇಷನ್ ಇನ್‌ಸ್ಟಾಲ್ ಮಾಡಿಕೊಂಡು, ಈ ಆ್ಯಪ್ ಬಳಸಿಕೊಂಡು ತಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಡುವುದರ ಜೊತೆಗೆ ಅದೇ ಮೊಬೈಲ್‌ನಿಂದ ತಮ್ಮ ಗ್ರಾಮದ ಇತರೇ ರೈತರ ಜಮೀನಿನ ಸಮೀಕ್ಷೆ ಕೂಡ ದಾಖಲಿಸಲು ಸಾಧ್ಯವಿದೆ. ಸಮೀಕ್ಷೆ ಅಳವಡಿಕೆ ಕಾರ್ಯದಲ್ಲಿ ಆಧಾರ್ ಸಂಖ್ಯೆ ಕಡ್ಡಾಯವಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ರಾಜ್ಯದ ಇತರೆ ಜಿಲ್ಲೆಗಳಲ್ಲಿ ಅತಿವೃಷ್ಠಿ, ಅನಾವೃಷ್ಠಿಯಂತಹ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಬೆಳೆ ಹಾನಿಯಾಗುವ ಸಂಭವವಿರುವುದರಿಂದ ಆ ಜಿಲ್ಲೆಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆವಿಮೆ ಮಾಡಿಸುತ್ತಿದ್ದಾರೆ. ವಿಮೆ ಪಾವತಿ ಸಂದರ್ಭದಲ್ಲಿ ಗೊಂದಲ ಉಂಟಾಗುತ್ತಿದ್ದು, ಇದಕ್ಕೆ ಪರಿಹಾರಾರ್ಥ ವೈಜ್ಞಾನಿಕವಾಗಿ ನಿಖರ ಮಾಹಿತಿಗಳನ್ನು ದಾಖಲಿಸಲು ಹಾಗೂ ವಿಮಾ ಕಂಪೆನಿಗಳಿಂದ ರೈತರ ಹಾನಿ ಯಾದ ಬೆಳೆಗಳಿಗೆ ಹೆಚ್ಚಿನ ಪರಿಹಾರ ಒದಗಿಸುವ ಉದ್ದೇಶದಿಂದ ರಾಜ್ಯಾದ್ಯಂತ ಈ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಪ್ರಿಯಾಂಕ ಸಭೆಗೆ ವಿವರಿಸಿದರು.

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗದ ಕಾರಣ ಜಿಲ್ಲೆಯ ರೈತರು ಬೆಳೆವಿಮೆ ಮಾಡಿಸಲು ಕಡಿಮೆ ಆಸಕ್ತಿ ತೋರುತಿದ್ದಾರೆ. ಆದರೆ ಪ್ರಾಕೃತಿಕ ವಿಕೋಪಗಳು ಯಾವುದೇ ಮುನ್ಸೂಚನೆ ನೀಡದೇ ಸಂಭವಿಸುವುದರಿಂದ, ಈ ಸಂದರ್ಭದಲ್ಲಿ ಜಿಲ್ಲೆಯ ರೈತರು ನಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಹಾಗೂ ಸಕಾಲಿಕ ಮತ್ತು ನ್ಯಾಯಯುತ ಪರಿಹಾರ ಪಾವತಿ ಮಾಡುವ ಉದ್ದೇಶದಿಂದ ಕೈಗೊಂಡಿರುವ ಈ ಸಮೀಕ್ಷಾ ಕಾರ್ಯದಲ್ಲಿ ಜಿಲ್ಲೆಯ ಎಲ್ಲಾ ರೈತರು ಭಾಗವಹಿಸುಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ವೆಬ್‌ಸೈಟ್‌ನಲ್ಲಿ ಸಮೀಕ್ಷಾ ಆ್ಯಪ್ ಬಳಸುವ ಕುರಿತು ವೀಡಿಯೋ ಮಾಹಿತಿಯನ್ನು ಅಳವಡಿಸಲಾಗಿದೆ ಹಾಗೂ ಸಮೀಕ್ಷಾ ವಿವರ ದಾಖಲಿಸುವ ಕುರಿತ ಮಡಿಕೆಪತ್ರವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದರು.

ಭೂಮಿ ಕೇಂದ್ರದ ಕನ್ಸಲ್ಟೆಂಟ್ ವಿನೋದ್, ಬೆಳೆ ಸಮೀಕ್ಷಾ ಆ್ಯಪ್ ಬಳಸುವ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಪ್ರತಾಪ್ ಚಂದ್ರ ಶೆಟ್ಟಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಆಂಥೋಣಿ ಮರಿಯಾ ಇಮಾನ್ಯುಯಲ್, ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿ ಗಳು, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ವಿವಿಧ ರೈತ ಸಂಘಟನೆಗಳ ಮುಖಂಡರು, ಪ್ರಗತಿಪರ ರೈತರು ಉಪಸ್ಥಿತರಿದ್ದರು.

ಬೆಳೆ ಸಮೀಕ್ಷೆಗೆ ವಿದ್ಯಾರ್ಥಿಗಳಿಗೂ ಅವಕಾಶ
ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ, ಜಿಲ್ಲೆಯ ವಿವಿಧ ಕಾಲೇಜುಗಳ ಆಸಕ್ತ ವಿದ್ಯಾರ್ಥಿಗಳಿಗೆ, ಈ ಆ್ಯಪ್ ಬಳಸುವ ಕುರಿತು ತರಬೇತಿ ನೀಡಲು ಉದ್ದೇಶಿಸಲಾಗಿದೆ. ಆಸಕ್ತ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳ ಪಟ್ಟಿಯನ್ನು ನೀಡಿದಲ್ಲಿ, ಅವರಿಗೆ ಸಮೀಕ್ಷೆ ಮಾಡುವ ಕುರಿತು ತರಬೇತಿ ನೀಡಲಾಗುವುದು. ಕಾಲೇಜು ವಿದ್ಯಾರ್ಥಿಗಳು ಈ ಆ್ಯಪ್‌ನ್ನು ಅತ್ಯಂತ ಸುಲಭವಾಗಿ ಬಳಸಬಹುದಾಗಿದ್ದು, ಈ ಸಮೀಕ್ಷೆ ನಡೆಸುವ ವಿದ್ಯಾರ್ಥಿ ಗಳಿಗೆ ಜಿಲ್ಲಾಡಳಿತ ವತಿಯಿಂದ ಪ್ರಶಂಸನಾ ಪತ್ರ ವಿತರಿಸಲಾಗುವುದು ಎಂದರು.

ಈ ಪ್ರಮಾಣ ಪತ್ರಗಳು ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ವಿದ್ಯಾರ್ಥಿಗಳು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಪ್ರಾಯೋಗಿಕ ಅನುಭವ ಹೊಂದಿರುವ ಪ್ರಮಾಣಪತ್ರಕ್ಕೆ ಸಮನಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಬಿಡುವಿನ ಅವಧಿಯಲ್ಲಿ ಸಮೀಕ್ಷೆ ನಡೆಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News